- ಹಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣ । ನೀಡಲಾಗಿದೆ ಕಾರ್ಯಾದೇಶ
ನಗರಸಭೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಕೋಟ್ಯಂತರ ರು. ಬಿಡುಗಡೆ ಮಾಡಿದೆ. ಹಾಗಾಗಿ ಟೆಂಡರ್ ಪ್ರಕ್ರಿಯೆ ಕೂಡ ಮುಗಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರದ ಶಾಸಕರು ತಮ್ಮ ಶಾಸಕರ ನಿಧಿಯಲ್ಲಿ ₹10 ಕೋಟಿ ರು. ನಗರಸಭೆಗೆ ರಸ್ತೆಗಳ ಡಾಂಬರೀಕರಣಕ್ಕೆ ನೀಡಿದ್ದಾರೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿಸಿ, ಗುತ್ತಿಗೆ ದಾರರಿಗೆ ಕಾರ್ಯಾದೇಶ ನೀಡಲಾಗಿದೆ ಎಂದರು.ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಬಡಾವಣೆಗಳಲ್ಲಿನ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಕ್ಕಮಗಳೂರು ನಗರಸಭೆಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿದೆ. 15ನೇ ಹಣಕಾಸು ಯೋಜನೆಯಡಿ ₹6.59 ಕೋಟಿ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ₹2.63 ಕೋಟಿಯನ್ನು ರಸ್ತೆ ಮತ್ತು ಚರಂಡಿಗೆ ಬಳಸಿಕೊಳ್ಳಲಾಗುವುದು. ಕುಡಿಯುವ ನೀರಿನ ಸಂಪರ್ಕಕ್ಕೆ ಪೈಪ್ ಲೈನ್ ಅಳವಡಿಕೆಗೆ ₹2 ಕೋಟಿ ಹಾಗೂ ಕಸ ವಿಂಗಡಣೆ ಘಟಕದಲ್ಲಿ ಶೆಡ್ ನಿರ್ಮಾಣ, ಮಳೆ ನೀರು ಕೊಯ್ಲು, ಇಂದಾವರದಲ್ಲಿರುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ರಸ್ತೆ ನಿರ್ಮಾಣಕ್ಕೆ ₹2 ಕೋಟಿ ಬಳಸಿಕೊಳ್ಳಲಾಗುತ್ತಿದ್ದು, ಈ ಕಾಮಗಾರಿಗಳಿಗೂ ಕೂಡ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದೆ. ರಾಜ್ಯ ಸಭಾ ಸದಸ್ಯರಾದ ಜೈರಾಮ್ ರಮೇಶ್ ಚಿಕ್ಕಮಗಳೂರು ನಗರದ ರಸ್ತೆಗಳ ಅಭಿವೃದ್ಧಿಗೆ ₹2 ಕೋಟಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಎಸ್‌ಎಫ್‌ಸಿಯಡಿಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಬೆಡ್, ಕಾಟ್, ಕುಡಿಯುವ ನೀರಿನ ಕಾಮಗಾರಿಗಳಿಗೆ ₹20 ಲಕ್ಷ, 2021-22ನೇ ಸಾಲಿನಿಂದ ಈವರೆಗೆ ಉಳಿದಿರುವ ವಿವಿಧ ಅನುದಾನಗಳಲ್ಲಿ ₹ 12 ಲಕ್ಷ ರು.ಗಳನ್ನು ಪಾರ್ಕ್‌ಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
---- ಬಾಕ್ಸ್ ----ಸ್ವಚ್ಛತೆ ಕುರಿತು ಅರಿವುಸ್ವಚ್ಛ ಭಾರತ ಮಿಷನ್ ೨.೦ ಯೋಜನೆಯಡಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ನಗರಸಭೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದಿ ನಾಟಕ, ಗೋಡೆ ಬರಹ, ಮ್ಯಾರಥಾನ್, ಎಲ್‌ಇಡಿ ಬೋರ್ಡ್, ಮೊಬೈಲ್ ಆಫ್ ಮೂಲಕ ಅರಿವು ಮೂಡಿಸಲಾಗುವುದು. ಶನಿವಾರ ಬೆಳಿಗ್ಗೆ 7 ಗಂಟೆಗೆ ನಗರದ ತಾಲೂಕು ಕಚೇರಿಯಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ಮೂಲಕ ನಗರಸಭಾ ಕಚೇರಿವರೆಗೆ ವಾಕಥಾನ್-ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೌರಾಯುಕ್ತ ಬಸವರಾಜ್ ತಿಳಿಸಿದರು.
ಚಿಕ್ಕಮಗಳೂರು ನಗರದ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ನೀಡಲು 5 ಬಾರಿ ಟೆಂಡರ್ ಕರೆದರೂ ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ.
ಪೌರಾಯುಕ್ತ 14 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ.
ಪೌರಾಯುಕ್ತರು