ಅನ್ಯ ಕೋಮಿನ ಯುವಕರಿಂದ ಹಲ್ಲೆ: ದೂರು ದಾಖಲು

KannadaprabhaNewsNetwork | Published : Nov 22, 2024 1:19 AM

ಸಾರಾಂಶ

ರಾಜೀವನಗರದ ಶಕೀಲ್ ಅಹ್ಮದ್(೨೪), ಮಹಮ್ಮದ್ ಮಾಜ್ (೨೬) ಹಾಗೂ ಗೋಲಗೇರಿ ಓಣಿಯ ಉಬೇದ್ ಸವಣೂರ್(೨೫) ಹಲ್ಲೆ ನಡೆಸಿದ ಆರೋಪಿಗಳು.

ಶಿರಸಿ: ತನಗೆ ಪರಿಚಿತವಿದ್ದ ಅನ್ಯ ಕೋಮಿನ ಯುವತಿಗೆ ಕೆಲಸ ಕೊಡಿಸಲು ಕರೆದೊಯ್ದಿದ್ದ ಯುವಕನಿಗೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ ಘಟನೆ ಬುಧವಾರ ನಗರದ ಶಿವಾಜಿ ಚೌಕ್‌ನಲ್ಲಿ ನಡೆದಿದೆ.ಇಲ್ಲಿನ ರಾಜೀವನಗರದ ಶಕೀಲ್ ಅಹ್ಮದ್(೨೪), ಮಹಮ್ಮದ್ ಮಾಜ್ (೨೬) ಹಾಗೂ ಗೋಲಗೇರಿ ಓಣಿಯ ಉಬೇದ್ ಸವಣೂರ್(೨೫) ಹಲ್ಲೆ ನಡೆಸಿದ ಆರೋಪಿಗಳು. ತಾಲೂಕಿನ ಕೊರ್ಲಕಟ್ಟಾ ಗೌಡಕೊಪ್ಪದ ವೀರೇಂದ್ರ ಜೀನದತ್ತ ಜೈನ್(೨೧) ಹಲ್ಲೆಗೊಳಗಾದ ಯುವಕ. ಶಿರಸಿ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.

ಚನ್ನಾಪುರ ನಿವಾಸಿ ಉಸ್ಮಾ ಬಾನು(೨೦) ಹಾಗೂ ವೀರೇಂದ್ರ ಜಿನದತ್ತ ಜೈನ್ ಹತ್ತಿರದ ಊರಿನವರಾಗಿದ್ದು, ಪರಿಚಿತರಾಗಿದ್ದರು. ವೀರೇಂದ್ರ ಜಿನದತ್ತ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದು, ತನ್ನ ಆಸ್ಪತ್ರೆಯಲ್ಲಿ ಉಸ್ಮಾ ಬಾನುವನ್ನು ನರ್ಸ್ ಹುದ್ದೆಗಾಗಿ ಸಂದರ್ಶನಕ್ಕೆ ಕರೆದೊಯ್ದಿದ್ದ.

ನಂತರ ಆಕೆಯೊಂದಿಗೆ ಐಸ್ ಕ್ರೀಮ್ ಪಾರ್ಲರ್‌ನಲ್ಲಿ ಐಸ್ ಕ್ರೀಮ್ ತಿನ್ನುತಿದ್ದ ವೇಳೆ ಅನ್ಯ ಕೋಮಿನ ಯುವಕರು ತಮ್ಮ ಕೋಮಿನ ಯುವತಿಯೊಂದಿಗಿದ್ದಿಯಾ, ನಮ್ಮ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದಿಯಾ ಎಂದು ಹೇಳಿ ಅಲ್ಲಿಯೇ ಹಲ್ಲೆ ಮಾಡಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐವರು ದರೋಡೆಕೋರರ ಬಂಧನ

ಯಲ್ಲಾಪುರ: ಕಣ್ಣಿಗೆ ಕಾರದಪುಡಿ ಎರಚಿ ಬೈಕ್ ಮತ್ತು ಹಣ ದೋಚಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ.ನ. ೧೯ರಂದು ಶಿರಸಿಯ ವ್ಯಾಪಾರಿ ಅಕ್ತರ್ ಗಂಗೊಳ್ಳಿ ಎಂಬ ವ್ಯಕ್ತಿ ಯಲ್ಲಾಪುರದಿಂದ ಶಿರಸಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಲಸ್ಕಂಡ ಕ್ರಾಸ್ ಬಳಿ ಮೂತ್ರ ವಿಸರ್ಜನೆಗೆ ನಿಂತಾಗ, ಐವರು ವ್ಯಕ್ತಿಗಳು ದಾರಿ ಕೇಳುವ ನೆಪದಲ್ಲಿ ಸಮೀಪಕ್ಕೆ ಬಂದು ಕಣ್ಣಿಗೆ ಕಾರದಪುಡಿ ಎರಚಿ, ಪ್ರತಿರೋಧದ ನಡುವೆಯೇ ಬೈಕ್ ಮತ್ತು ₹೫೦,೦೦೦ ದೋಚಿ ಪರಾರಿಯಾಗಿದ್ದರು.ಅಕ್ತರ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಮೀರ್ ಅದಂ ಆದಿಲ್ ಮೀರ್ ಮುನಾಫ್‌, ರವಿ ನಾರಾಯಣ ಸಿದ್ದಿ, ಮಹಮ್ಮದ್ ರಿಜ್ವಾನ ಮೆಹಬೂಬ ಬಿಜಾಪುರ, ಜಹಿರುದ್ದೀನ್ ಜೈರೋ ದಸ್ತಗಿರಿ ಖಾದರಬಾಯಿ, ನಾಗೇಂದ್ರ ಟುಡೋ ಬಾಬು ಸಿದ್ದಿ ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ₹೨೫ ಸಾವಿರ ನಗದು, ದರೋಡೆ ಮಾಡಿದ ಸ್ಕೂಟಿ, ಕೃತ್ಯಕ್ಕೆ ಬಳಸಿದ ಎರಡು ಸ್ಕೂಟಿ, ಬೆಲೆಬಾಳುವ ಮೊಬೈಲ್‌ಗಳು ಸೇರಿದಂತೆ ₹೧.೯೩ ಲಕ್ಷ ಮೌಲ್ಯದ ಸ್ವತ್ತುಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this article