ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯುತ್ ಟವರ್ ಮತ್ತು ಲೈನ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಜಮೀನುಗಳಿಗೆ ತಾಲೂಕಿನ ಕುದರಗುಂಡಿ ಗ್ರಾಮದ ರೈತರಿಗೆ ಗುರುವಾರ ನಿಗಮದ ಅಧಿಕಾರಿಗಳು ಪರಿಹಾರದ ಚೆಕ್ ವಿತರಣೆ ಮಾಡಿದ ನಂತರ ವಿವಾದ ಸುಖಾಂತ್ಯಗೊಂಡಿದೆ.ಪರಿಹಾರ ನೀಡುವಂತೆ ಆಗ್ರಹಿಸಿ ಬುಧವಾರ ಲೈನ್ ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸಿ, ವಿದ್ಯುತ್ ಪ್ರಸರಣ ನಿಗಮದ ಕ್ರಮ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು.
ಭೂ ಪರಿಹಾರ ಪಡೆದ ರೈತರು ಸಮ್ಮತಿ ಸೂಚಿಸಿದ ಬಳಿಕ ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿ ತ್ವರಿತಗತಿಯಲ್ಲಿ ವಿದ್ಯುತ್ ಲೈನ್ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿದ ನಂತರ ತೂಬಿನಕೆರೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಮಾಡಲಾಯಿತು. ರಾಮನಗರ ಜಿಲ್ಲೆ ಕೊತ್ತಿಪುರ ಗ್ರಾಮದಿಂದ ಮಂಡ್ಯದ ತೂಬಿನಕೆರೆ ಕೈಗಾರಿಕಾ ಪ್ರದೇಶ ದ 220 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪೂರೈಕೆ ಮಾಡಲು ಟವರ್ ನಿರ್ಮಾಣ ಲೈನ್ ಎಳೆಯಲು ಈ ಹಿಂದೆ ವಶಪಡಿಸಿಕೊಂಡಿದ್ದ ರೈತರ ಭೂಮಿಗೆ ಕುದುರಗುಂಡಿ ಗ್ರಾಮದ ಹಲವು ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡಲಾಗಿತ್ತು.ಈ ಹಿನ್ನೆಲೆಯಲ್ಲಿ ಜಮೀನುಗಳಲ್ಲಿ ಕಡಿದು ಬಿದ್ದಿದ್ದ ಲೈನ್ ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸಿದ ಕಾರಣ ಕಳೆದ ನಾಲ್ಕು ದಿನಗಳಿಂದ ಅಧಿಕಾರಿಗಳು ಬರಿಗೈಲಿ ವಾಪಸ್ ಆಗುತ್ತಿದ್ದರು. ಅಧಿಕಾರಿಗಳು ರೈತರ ಮನವೊಲಿಸುವ ಕಾರ್ಯವು ವಿಫಲವಾಗಿತ್ತು.ತರುವಾಯು ರೈತರ ಒತ್ತಡಕ್ಕೆ ಮಣಿದ ರಾಮನಗರ ವಿಭಾಗದ ವಿದ್ಯುತ್ ಪ್ರಸರಣ ನಿಗಮದ ಇಇ ಸುಮೇರಹಳ್ಳಿ, ಸಂತೋಷ್, ಎಇಇ ಶ್ರೀಧರ್, ಎಇ ದಿನೇಶ್ ಅವರು ತಹಸೀಲ್ದಾರ್ ಡಾ.ಶ್ವೇತಾ ಮತ್ತು ಪೊಲೀಸರ ಸಮ್ಮುಖದಲ್ಲಿ ನಿಂಗಮ್ಮ, ಪ್ರೇಮ, ಪುಟ್ಟಸ್ವಾಮಿ, ಚಂದ್ರಶೇಖರ, ಮಂಗಳ ಗೌರಮ್ಮ, ಮಲ್ಲಾಜಮ್ಮ ಸೇರಿದಂತೆ 10 ಮಂದಿ ರೈತರಿಗೆ ಟವರ್ ಮತ್ತು ಲೈನ್ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡ ಜಮೀನುಗಳಿಗೆ ಪ್ರತಿಗುಂಟೆಗೆ ಐದು ಸಾವಿರದಂತೆ 58 ಲಕ್ಷ ಪರಿಹಾರ ವಿತರಣೆ ಮಾಡಿದರು. ನಂತರ ರೈತರು ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.