ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದು ಪ್ರಗತಿಪರ ರೈತ ಅನಂತ ಪಡನಾಡ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದು ಪ್ರಗತಿಪರ ರೈತ ಅನಂತ ಪಡನಾಡ ಹೇಳಿದರು.ಸ್ವಾಮಿ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯಲ್ಲಿ ಮಕ್ಕಳ ಸಾಂಸ್ಕೃತಿಕ ಹಬ್ಬ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಜೀವನದ ಒಂದು ಭಾಗವಾಗಿವೆ. ದೇಶದ ಕೃಷಿ ಪದ್ಧತಿಯಲ್ಲಿಯೂ ಇಂದು ಯಾಂತ್ರಿಕ ಕೃಷಿ ಮತ್ತು ಸುಧಾರಿತ ಬೇಸಾಯ ಪದ್ಧತಿಗಳನ್ನು ಮಾಡಲಾಗುತ್ತಿದೆ ಎಂದರು.ಚಿಕ್ಕಮಕ್ಕಳ ತಜ್ಞ ಡಾ.ಆನಂದ ಗುಂಜಿಗಾವಿ ಮಾತನಾಡಿ, ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಶಾಲಾ ಮಕ್ಕಳಿಗೆ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಲು ಉತ್ತಮ ವೇದಿಕೆ ಒದಗಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಹಾಗೂ ಸಮಾಜದಲ್ಲಿ ಬೇರೂರಿರುವ ಕಂದಾಚಾರ ಮತ್ತು ಮೌಢ್ಯವನ್ನು ನಿವಾರಣೆಗೆ ತೊಡಗಬೇಕು ಎಂದರು.ಉಪನ್ಯಾಸಕ ರಮೇಶ ಮೈಶಾಳೆ ಮಾತನಾಡಿ, ವಿದ್ಯಾರ್ಥಿಗಳೇ ಸಾಧಿಸುವ ಛಲ ಮತ್ತು ಪ್ರಶ್ನಿಸುವ ಮನಸ್ಸು ನಿಮ್ಮದಾದರೆ ಸಾಧನೆ ಸುಲಭ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್ ಮತ್ತು ಟಿವಿಗಳ ದಾಸರಾಗಬೇಡಿ. ಇವುಗಳಿಂದ ಹೊರಬಂದು ಪಠ್ಯಪುಸ್ತಕ ಮತ್ತು ಸಾಧಕರ ಚರಿತ್ರೆಗಳನ್ನು ಅಧ್ಯಯನ ಮಾಡುವಂತೆ ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ಡಾ.ಸತೀಶ ಮುಗ್ಗನವರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಿ.ಡಿ.ಮೇಕನಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಲಲಿತಾ ಮೇಕನಮರಡಿ, ಮುಖ್ಯೋಪಾಧ್ಯಾಯ ಪ್ರಶಾಂತ್ ಮುನ್ನೊಳ್ಳಿ, ಕಾನಿಪ ಸಂಘದ ಅಧ್ಯಕ್ಷ ರಾಕೇಶ್ ಮೈಗೂರ ಸೇರಿ ಹಲವರು ಇದ್ದರು.