ಸಂಕ್ರಾಂತಿ ಹಬ್ಬದ ದಿನ ಸ್ನಾನಕ್ಕೆ ಹೋಗಿದ್ದ ಯುವಕರಿಬ್ಬರು ತಂದೆಯ ಕಣ್ಣೆದುರೇ ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಂಕ್ರಾಂತಿ ಹಬ್ಬದ ದಿನ ಸ್ನಾನಕ್ಕೆ ಹೋಗಿದ್ದ ಯುವಕರಿಬ್ಬರು ತಂದೆಯ ಕಣ್ಣೆದುರೇ ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮನೋಜ ಮೌನೇಶ ಬಡಿಗೇರ(೧೭) ಹಾಗೂ ಪ್ರಮೋದ ಮಂಜು ಬಡಿಗೇರ (೧೭) ಮೃತರು. ಸಹೋದರರ ಮಕ್ಕಳಾಗಿರುವ ಈ ಇಬ್ಬರು ಪ್ರಥಮ ಪಿಯುಸಿ ಓದುತ್ತಿದ್ದರು. ಸಂಕ್ರಾಂತಿ ನಿಮಿತ್ತ ಗುರುವಾರ ಕಾಲೇಜಿಗೆ ರಜೆ ಇದ್ದ ಕಾರಣ ತಂದೆ ಮಂಜು ಬಡಿಗೇರ ಜೊತೆಗೆ ಮನೋಜ್‌, ಪ್ರಮೋದ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಗ್ರಾಮದ ಹೊರವಲಯದಲ್ಲಿನ ಕ್ವಾರಿಗೆ ಹೋಗಿದ್ದರು. ಸ್ನಾನಕ್ಕೆಂದು ಕ್ವಾರಿಯ ನೀರಿಗೆ ಇಳಿದಿದ್ದು, ನೀರಿನ ಆಳ ಅಂದಾಜಿಸಲಾಗದೇ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ನೀರಿನಿಂದ ಮೇಲೆತ್ತಿ ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಯ ವೈದ್ಯರು ಅಸುನೀಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಇದೇ ವೇಳೆ ಸ್ಥಳೀಯರು ಮತ್ತೊಬ್ಬ ಬಾಲಕನ ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಕೆ.ಬಿ. ಜಕ್ಕನ್ನವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರೀಸಿಲಿಸಿದರು. ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.