ಸಾಧಕರು ಮತ್ತು ಸೇವಾ ಕಾರ್ಯಗಳ ಯಶಸ್ನಿನ ಕಥೆಗಳು ರೋಟರಿಯಲ್ಲಿ ದಾಖಲೆಯಾಗಿಸಬೇಕು. ಈ ಮೂಲಕ ಇಂಥ ಕಥೆಗಳು ಮತ್ತಷ್ಟು ಸಮಾಜಸೇವೆಗೆ ಜನರಿಗೆ ಪ್ರೇರಣೆಯಾಗಬೇಕೆಂದು ರೋಟರಿ ಜಿಲ್ಲೆ 3181 ರ ಗವರ್ನರ್ ಪಿ.ಕೆ. ರಾಮಕೃಷ್ಣ ಕರೆ ನೀಡಿದ್ದಾರೆ.
ಮಡಿಕೇರಿ: ಸಾಧಕರು ಮತ್ತು ಸೇವಾ ಕಾರ್ಯಗಳ ಯಶಸ್ನಿನ ಕಥೆಗಳು ರೋಟರಿಯಲ್ಲಿ ದಾಖಲೆಯಾಗಿಸಬೇಕು. ಈ ಮೂಲಕ ಇಂಥ ಕಥೆಗಳು ಮತ್ತಷ್ಟು ಸಮಾಜಸೇವೆಗೆ ಜನರಿಗೆ ಪ್ರೇರಣೆಯಾಗಬೇಕೆಂದು ರೋಟರಿ ಜಿಲ್ಲೆ 3181 ರ ಗವರ್ನರ್ ಪಿ.ಕೆ. ರಾಮಕೃಷ್ಣ ಕರೆ ನೀಡಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಧಕರನ್ನು ಸನ್ಮಾನಿಸಿ ಮಾತನಾಡಿದ ರಾಮಕೃಷ್ಣ, ರೋಟರಿ ಸಂಸ್ಥೆಗಳು ಪ್ರತೀ ವರ್ಷ ಸಾಕಷ್ಟು ಸೇವಾ ಕಾರ್ಯಯೋಜನೆಗಳ ಮೂಲಕ ನೂರಾರು ಜನರಿಗೆ ಜೀವನಾಧಾರ ಕಲ್ಪಿಸುತ್ತಿವೆ. ಇಂಥ ಯೋಜನೆಗಳನ್ನು ಯಶಸ್ವಿ ಕಥೆಯ ದಾಖಲೆಯಾಸಿದ್ದೇ ಆದಲ್ಲಿ ಮತ್ತಷ್ಟು ಮಂದಿಗೆ ಇದರಿಂದ ಸಾಮಾಜಿಕ ಸೇವಾ ಕಾರ್ಯಕ್ಕೆ ಸ್ಪೂರ್ತಿ ದೊರಕುವಂತಾಗುತ್ತದೆ ಎಂದು ಕರೆ ನೀಡಿದರು. ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ ಮಾತನಾಡಿ, ಇದೇ ತಿಂಗಳಾಂತ್ಯದಲ್ಲಿ ಮೈಸೂರಿನಲ್ಲಿ ರೋಟರಿ ಜಿಲ್ಲಾ ಸಮಾವೇಶ ಆಯೋಜಿತವಾಗಿದ್ದು 2 ಸಾವಿರಕ್ಕೂ ಅಧಿಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ವಿವಿಧ ಸೇವಾ ಯೋಜನೆಗಳ ಮೂಲಕ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ಎಂದೂ ಧಿಲನ್ ಮೆಚ್ಚುಗೆ ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾವಾಡಿಯಲ್ಲಿ 69 ಗೋವುಗಳನ್ನು ಸಲಹುತ್ತಿರುವ ಕಾಮಧೇನು ಗೋಶಾಲಾ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ರಾಮಚಂದ್ರಭಟ್, ಗೋವಿನ ಸೇವೆ ಮಾಡುವುದು ಮಾತೆಯ ಸೇವೆಗೆ ಸಮಾನವಾಗಿದೆ. ಗೋವು ನಿತ್ಯ ನಿರಂತರ ಕಲ್ಪವೃಕ್ಷವಾಗಿದ್ದು, ಗೋವುಗಳನ್ನು ಸಂರಕ್ಷಿಸಿದ್ದೇ ಆದಲ್ಲಿ ಆ ಪುಣ್ಯದ ಕಾಯ೯ ಸಂರಕ್ಷಕನನ್ನು ಕಾಪಾಡುತ್ತದೆ ಎಂದರು. ಅಮ್ಮನ ಮತ್ತು ಗೋವಿನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಅವರು ಹೇಳಿದರು. ಗೋವಿಲ್ಲದ ಜೀವನವನ್ನು ಕಲ್ಪಿಸಲೇ ಸಾಧ್ಯವಾಗುವುದಿಲ್ಲ. ಹೀಗಾಗಿ ಗೋವಿನ ಪೋಷಣೆ, ಪಾಲನೆಗೆ ಪ್ರತೀಯೋರ್ವರೂ ಮನಸ್ಸು ಮಾಡಬೇಕೆಂದು ಕರೆ ನೀಡಿದರು.ಸನ್ಮಾನದ ಗೌರವ ಸ್ವೀಕರಿಸಿ ಮಾತನಾಡಿದ ತಾಯಿಯನ್ನು ಸ್ಕೂಟರ್ ನಲ್ಲಿ 1 ಲಕ್ಷ ಕಿ.ಮೀ. ದೇಶಪರ್ಯಟೆ ಮಾಡಿಸಿದ ಮೈಸೂರಿನ ಆಧುನಿಕ ಶ್ರವಣ ಕುಮಾರ ಖ್ಯಾತಿಯ ಡಿ. ಕೃಷ್ಣಕುಮಾರ್, ತಂದೆತಾಯಿಯರೇ ಮಾತನಾಡುವ ದೇವರಾಗಿದ್ದಾರೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ತಾಯಿ ಅನುಭವಿಸುವ ಪರಿಶ್ರಮವನ್ನು ಸ್ಮರಿಸಿಕೊಂಡು ಅಮ್ಮನ ಕಷ್ಟಸುಖಕ್ಕೆ ಸ್ಪಂದಿಸುವ ಮನೋಭಾವ ಮಕ್ಕಳಲ್ಲಿರಬೇಕೆಂದು ಹೇಳಿದರು. ಜೀವನದ ಸಂಧ್ಯಾಕಾಲದಲ್ಲಿ ಪೋಷಕರಿಗೆ ಮಕ್ಕಳ ಹಿತವಾದ ಮಾತುಗಳು ಅಪಾರ ಶಕ್ತಿ ಮತ್ತು ವೃದ್ಧಾಪ್ಯಕ್ಕೆ ಗೌರವ ತರಬಲ್ಲವು ಎಂದರು. ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಮಡಿಕೇರಿಯ ಪೊಲೀಸ್ ಸಿಬ್ಬಂದಿ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.ರೋಟರಿ ವಲಯ ಸೇನಾನಿ ಕಾರ್ಯಪ್ಪ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಮುಂದಿನ ಸಾಲಿನ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ವೇದಿಕೆಯಲ್ಲಿದ್ದರು. ಪ್ರಮೋದ್ ಕುಮಾರ್ ರೈ ಸಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಮುಂದಿನ ಸಾಲಿನ ಕಾರ್ಯದರ್ಶಿ ಡಾ.ಚೇತನ್ ಶೆಟ್ಟಿ, ರೋಟರಿ ಪ್ರಮುಖರಾದ ಅನಿಲ್ ಹೆಚ್.ಟಿ. ಅನಿತಾ ಪೂವಯ್ಯ, ರಶ್ಮಿ, ಕಪಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ನಲ್ಲಿ ಸಾಧನೆ ಮಾಡಿದ ಸದಸ್ಯರಾದ ಡಾ.ಚೆರಿಯಮನೆ ಪ್ರಶಾಂತ್, ಬಿ.ಜಿ. ಅನಂತಶಯನ, ಅನಿಲ್ ಹೆಚ್.ಟಿ., ಶರ್ವರಿ ಕಿರಣ್ ರೈ, ಅಭಿನ್ ರೈ ಅವರನ್ನು ಗೌರವಿಸಲಾಯಿತು.