ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ ವೀರ ರಾಣಿ ಕಿತ್ತೂರು ಚನ್ನಮ್ಮ ಸಮಾಜದ ಹಾಗೂ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹರಿಹರ
ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ ವೀರ ರಾಣಿ ಕಿತ್ತೂರು ಚನ್ನಮ್ಮ ಸಮಾಜದ ಹಾಗೂ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ತಿಳಿಸಿದರು.ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಗುರುವಾರ ಆಯೋಜಿಸಿದ್ದ ಹರಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಆಂಗ್ಲರ ವಿರುದ್ಧ ಹೋರಾಟ ನಡೆಸಿದ ಕರ್ನಾಟಕದ ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಅಂಥವರ ಇತಿಹಾಸವನ್ನು ಶಾಲಾ ಮಕ್ಕಳಿಗೆ ಬೋಧಿಸುವ ಅಗತ್ಯ ಇದೆ ಎಂದರು.
ಎರಡೂ ಪಂಗಡಗಳು ಪರಸ್ಪರ ಕೈ ಹಿಡಿದು ನಡೆದಲ್ಲಿ ಬದಲಾವಣೆ ಸಾಧ್ಯ: ಲಿಂಗಾಯತ ಜಾತಿ ಸಮೀಕ್ಷೆ ಬಿಕ್ಕಟ್ಟಿನ ಕಾಲದಲ್ಲಿ ವಚನಾನಂದರ ಜತೆ ಸರಿ ರಾತ್ರಿಯವರೆಗೆ ಚರ್ಚಿಸಿದ್ದೆವು. ನಾನು ಇಲ್ಲಿಗೆ ಆಗಮಿಸಿದಾಗ ವಚನಾನಂದರು ಮೂಲ ಗುರುಗಳ ಗದ್ದಿಗೆವರೆಗೆ ನನ್ನ ಕೈ ಹಿಡಿದುಕೊಂಡು ಕರೆದ್ಯೊಯ್ದರು. ಇದೇ ರೀತಿ ನಮ್ಮ ಎರಡೂ ಪಂಗಡಗಳ ಜನರೂ ಪರಸ್ಪರ ಕೈ ಹಿಡಿದು ನಡೆದಲ್ಲಿ ಬಹುತೇಕ ಬದಲಾವಣೆಗಳನ್ನು ಕಾಣಲು ಸಾಧ್ಯ. ಅಂಥಹ ಪ್ರಯತ್ನ ನಡೆಸಲಾಗುವುದು ಎಂದರು.ಕೇಂದ್ರ ಸಚಿವ ವಿ. ಸೋಮಣ್ಣ ಹರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಿತ್ತೂರು ಚನ್ನಮ್ಮ ಕೇವಲ ಪಂಚಮಸಾಲಿ ಸಮಾಜಕ್ಕೆ ಮಾತ್ರ ಸೇರಿಲ್ಲ. ಅವಳ ಧ್ಯರ್ಯ ಸಾಹಸಗಳ ಫಲವಾಗಿ ಇಡೀ ರಾಜ್ಯ ಮಟ್ಟಕ್ಕೆ ವ್ಯಾಪಿಸಿಕೊಂಡಿದ್ದಾಳೆ. ಮುಂದಿನ ದಿನಗಳಲ್ಲಿ ಚನ್ನಮ್ಮ ಅವರ ಜಯಂತಿಯನ್ನು ಕೇಂದ್ರದಿಂದ ಆಚರಿಸಲು ಪ್ರಯತ್ನ ಮಾಡಲಾಗುವುದು. ಪಂಚಮಸಾಲಿ ಸಮಾಜದ ಜನತೆ ವ್ಯವಸಾಯ ಸ್ವಾಭಿಮಾನದ ಮೂಲಕ ಬದುಕು ಕಟ್ಟಿಕೊಂಡವರು. ಸಂಸ್ಕಾರ, ಧರ್ಮ ಕಾಪಾಡುವ ಕಾರ್ಯ ಹಾಗೂ ಕೃಷಿ ಕೆಲಸದಲ್ಲಿ ನಿಪುಣರು ಎಂದರು.
ಮಹಾಂತ ಶ್ರೀ ಅವರ 13ನೇ ಪುಣ್ಯ ಸ್ಮರಣೋತ್ಸವವನ್ನು ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಉದ್ಘಾಟಿಸಿ ಮಾತನಾಡಿ, ಪಂಚಮಸಾಲಿ ಜನಾಂಗ ವ್ಯವಸಾಯವನ್ನೆ ನಂಬಿ ಬದುಕುವವರು. ಇವರ ತಾಳ್ಮೆ, ಶ್ರಮದಿಂದಾಗಿ 5ಸಾವಿರ ವರ್ಷವಾದರೂ ಮಣ್ಣಿನ ಫಲವತ್ತತೆ ಕಡಿಮೆಯಾಗಿಲ್ಲ ಎಂದರು.ಸಮಾಜದ ಪ್ರತಿಯೊಬ್ಬರಿಗೂ ಧ್ಯಾನ, ಜ್ಞಾನ ಅಗತ್ಯ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಇತರೆ ನಗರಗಳಿಗೆ ತೆರಳಬೇಕಾದ ಅವಶ್ಯಕತೆ ಇದೆ. ಅಂಥಹ ಕಡೆಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಕಟ್ಟಿ ಅವರಿಗೆ ಅನುಕೂಲ ಮಾಡಿ ಕೊಡುವ ಕಾರ್ಯ ಸಮಾಜದಿಂದ ಆಗಬೇಕಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಮಾಜವನ್ನು ಒಡೆಯುವ ಕೆಲಸ ಮಾಡದೆ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಆದಲ್ಲಿ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಪ್ರಜಾಪ್ರಭುತ್ವ ದೇಗುಲ ಎಂದು ಕರೆಯಲಾಗುತ್ತದೆ, ಅಲ್ಲಿ ಹೋದವರು ಯಾರು ಮೇಲು ಕೀಳು ಜಾತಿ ಎಂದು ನೋಡದೆ ಸರ್ವರ ಏಳ್ಗೆಯನ್ನು ಬಯಸುವ ಕೆಲಸವನ್ನು ಮಾಡಬೇಕು ಎಂದರುಡಾ. ವೇದಾರಾಣಿಗೆ ಪ್ರಶಸ್ತಿ ಪ್ರದಾನ:
ಪಂಚಮಸಾಲಿ ಹರಪೀಠಾಧ್ಯಕ್ಷ ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಶ್ರೀಗಳ 13ನೇ ವರ್ಷದ ಪುಣ್ಯ ಸ್ಮರಣೋತ್ಸವ, ಕಿತ್ತೂರು ರಾಣಿ ಚನ್ನಮಾಜಿ ದ್ವಿಶತಮಾನ ವಿಜಯೋತ್ಸವ ಸಮಾರೋಪ ಸಮಾರಂಭ, ಹರಪೀಠಾಧ್ಯಕ್ಷ ಪಂಚಮಸಾಲಿ ವಚನಾನಂದ ಶ್ರೀ ಅವರ ಅಷ್ಟಮ ವಾರ್ಷಿಕ ಪೀಠಾರೋಹಣ ಕಾರ್ಯಕ್ರಮ, ಉತ್ಸವ ರಾಕ್ ಗಾರ್ಡನ್ ಕಲಾ ನಿರ್ದೇಶಕಿ ಡಾ.ವೇದಾರಾಣಿ ದಾಸನೂರ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಶ್ರೀ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಶ್ರೀ, ಗವಿಮಠ ಸಿದ್ದನಹಳ್ಳಿ ಮಲ್ಲಿಕಾರ್ಜುನ ಶ್ರೀ, ಮನಗೂಳಿ ಹಿರಿಮಠ ಸಂಗನಬಸವ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಸಂಸದ ಬಿ.ವೈ.ರಾಘವೇಂದ್ರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ.ಎಸ್. ಬಸವಂತಪ್ಪ, ಡಿಜಿ ಶಾಂತನಗೈಡ, ಶ್ರೀನಿವಾಸ್ ಮಾನೆ, ಪ್ರಕಾಶ ಕೋಳಿವಾಡ, ಯಾಸಿರ್ ಪಠಾಣ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಳ್ಳಾರಿ ವಿರುಪಾಕ್ಷಪ್ಪ, ಮೋಹನ್ ಲಿಂಬಿಕಾಯಿ, ಬಿ.ಎಸ್. ಪಾಟೀಲ್, ಅರುಣ ಕುಮಾರ್ ಪೂಜಾರ್, ಮಹಿಮಾ ಪಾಟೀಲ್, ಸೇರಿದಂತೆ ಹಾಲಿ, ಮಾಜಿ ಶಾಸಕರು, ಸಂಸದರು ಭಾಗವಹಿಸಿದ್ದರು.ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ, ಆಡಳಿತಾಧಿಕಾರಿ ಡಾ.ರಾಜ್ ಕುಮಾರ್, ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್, ಹರ ಜಾತ್ರಾ ಮಹೋತ್ಸವದ ಅಧ್ಯಕ್ಷ ಡಾ. ಬಸವರಾಜ್ ವೀರಾಪುರ, ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್, ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್, ಗುರುಪೀಠದ ಪ್ರಮುಖರು ಇದ್ದರು.