ಮಹಾತ್ಮ ಗಾಂಧಿ ಅವರ ಆತ್ಮಕಥೆಯ ಸಂಪುಟ-2ರ ದಸ್ತಾವೇಜುಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ 51 ಪೆಟ್ಟಿಗೆಗಳಲ್ಲಿ ಭದ್ರವಾಗಿದ್ದು, ಅವುಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಾತ್ಮ ಗಾಂಧಿ ಅವರ ಆತ್ಮಕಥೆಯ ಸಂಪುಟ-2ರ ದಸ್ತಾವೇಜುಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ 51 ಪೆಟ್ಟಿಗೆಗಳಲ್ಲಿ ಭದ್ರವಾಗಿದ್ದು, ಅವುಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಸಂಬಂಧ, ‘ಜಾಗೃತ ಕರ್ನಾಟಕ-ಜಾಗೃತ ಭಾರತ’ ಸಂಘಟನೆ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿತು.
ಗಾಂಧೀಜಿಯವರ ಆತ್ಮಕಥೆಯ ‘ನನ್ನ ಸತ್ಯಾನ್ವೇಷಣೆ’ (ಮೈ ಎಕ್ಸ್‌ಪೆರಿಮೆಂಟ್ಸ್ ವಿಥ್ ಟ್ರುಥ್) ಸಂಪುಟ-2ರ ದಸ್ತಾವೇಜುಗಳು ದೆಹಲಿಯಲ್ಲಿರುವ ಮಾಜಿ ಪ್ರಧಾನಿ ನೆಹರು ಮ್ಯೂಸಿಯಂನಲ್ಲಿದ್ದವು. ಅದನ್ನು ರಾಹುಲ್ ಗಾಂಧಿ ತೆಗೆದುಕೊಂಡು ಹೋಗಿದ್ದಾರೆ. ಗಾಂಧೀಜಿಯವರ ಆತ್ಮಕಥೆ ಮೇಲೆ ಬೆಳಕು ಚೆಲ್ಲಲು ನಾಪತ್ತೆಯಾಗಿರುವ ದಸ್ತಾವೇಜುಗಳನ್ನು ಪತ್ತೆಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಈ ಹಿಂದೆ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದರು.ಅದನ್ನು ವಜಾಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರ ಮನವಿ ಕುರಿತು ಯಾವುದೇ ಆದೇಶ ಮಾಡಲಾಗದು. ಒಂದೊಮ್ಮೆ ಅರ್ಜಿದಾರರು ಇತಿಹಾಸದ ಸಂಶೋಧನೆ ಮಾಡಲು ಮುಂದಾದರೆ, ಅದಕ್ಕೆ ಈ ಆದೇಶದಿಂದ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಿತ್ತು.
ಇದೀಗ ಆ ಆದೇಶವನ್ನು ಹಿಂಪಡೆಯಬೇಕು. ನನ್ನ ಮನವಿ ಕುರಿತು ಹೆಚ್ಚಿನ ದಾಖಲೆಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ರಾಹುಲ್ ಗಾಂಧಿ ಅವರ ಬಳಿ 51 ಪೆಟ್ಟಿಗೆಯಲ್ಲಿರುವ ಮಹಾತ್ಮ ಗಾಂಧಿ ಅವರ ಆತ್ಮಕಥೆಯ ಸಂಪುಟ–2ರ ದಸ್ತಾವೇಜುಗಳು ಪತ್ತೆಹಚ್ಚಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.