ಕನ್ನಡಪ್ರಭ ವಾರ್ತೆ ಬೆಳಗಾವಿ
ಐಗಳಿ ಗ್ರಾಮದ ಹಾಗೂ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ, ಮಹಾಂತೇಶ ಕಾಂಬಳೆ, ಸಂತೋಷ ಗಡಾದೆ, ಅಶೋಕ ಗಡಾದೆ, ಸಂದೀಪ ಕಾಂಬಳೆ, ತಿಪ್ಪಣ್ಣಾ ಗಡಾದೆ, ರಾಜು ಗಡಾದೆ, ವಿಜಯ ಗಡಾದೆ, ಕುಮಾರ ಕಾಂಬಳೆ, ಆದಿತ್ಯ ಗಡಾದೆ, ಪರುಶರಾಮ ಗಡಾದೆ ಹಾಗೂ ಸುಭಾಷ ಗಡಾದೆ ವಿರುದ್ಧ ದೂರು ದಾಖಲಾಗಿದೆ. ಐಗಳಿ ಗ್ರಾಮದ ರಾಜೇಂದ್ರ ಗಡಾದೆ, ಸೈದಪ್ಪಾ ಗಡಾದೆ ಹಾಗೂ ನಕುಶಾ ಗಡಾದೆ ಎಂಬುವವರು ಹಲ್ಲೆಗೆ ಒಳಗಾದವರು.
ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಬಾವಿಯಲ್ಲಿನ ನೀರು ಬಳಕೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮಹಿಳೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಸೇರಿದಂತೆ 14 ಜನ ವಿರುದ್ಧ ಪ್ರಕರಣ ದಾಖಲಾಗಿದೆ.ಏನಿದು ಘಟನೆ?:
ಸಂತ್ರಸ್ತ ನಕುಶಾ ಸೈದಪ್ಪಾ ಗಡಾದಿ ತಮ್ಮ ಮನೆ ಮುಂದಿದ್ದ ಸಾರ್ವಜನಿಕ ಬಾವಿಯಲ್ಲಿನ ನೀರು ಬಳಕೆ ಮಾಡಿಕೊಂಡು ಹೊಸ ಮನೆ ಕಟ್ಟುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿತರೆಲ್ಲರೂ ಆ ಬಾವಿಯ ಸುತ್ತಮುತ್ತ ಶೆಡ್‌ನೆಟ್ ಹಾಕಿಸಿದ್ದರು. ಇದನ್ನು ವಿರೋಧಿಸಿ ದೂರದಾರ ನಕುಶಾ ಬಾವಿಯಲ್ಲಿನ ನೀರು ಬಳಕೆಗೆ ಅವಕಾಶ ಮಾಡಿಕೊಡುವಂತೆ ಗ್ರಾಪಂಗೆ ದೂರು ಕೊಟ್ಟಿದ್ದ. ಹೀಗಾಗಿ ಗ್ರಾಪಂ ಅಧಿಕಾರಿಗಳು ಬಾವಿ ಸುತ್ತ ಹಾಕಿದ್ದ ಶೆಡ್‌ನೆಟ್ ತೆರವುಗೊಳಿಸಿ ನೀರು ಬಳಕೆ ಮಾಡಲು ಅವಕಾಶ ಕಲ್ಪಿಸಿದ್ದರು. ಈ ನಡುವೆ ಏ.12 ರಂದು ಆರೋಪಿತರೆಲ್ಲರೂ ಸೇರಿಕೊಂಡು ಮನೆ ಮುಂದೆ ಬಂದು ಬಾವಿಯಲ್ಲಿ ನೀರು ಬಳಸುತ್ತಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಬಂದ ಮಗನ ಮೇಲೆಯೂ ಜೀವದ ಬೆದರಿಕೆ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ನಕುಶಾ ಸೈದಪ್ಪಾ ಗಡಾದಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.