ಯುವತಿ ಮೇಲೆ ಹಲ್ಲೆ: ಐವರು ಮಂಗಳಮುಖಿಯರ ಬಂಧನ

KannadaprabhaNewsNetwork | Published : Aug 2, 2024 12:58 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿಯೇ ನಡುರಸ್ತೆಯಲ್ಲೇ ಯುವತಿಯೊಬ್ಬಳನ್ನು ವಿವಸ್ತ್ರಗೊಳಿಸಿ ಮನಬಂದಂತೆ ಹಲ್ಲೆ ಮಾಡಿದ್ದ ಮಂಗಳಮುಖಿಯರ ಗ್ಯಾಂಗ್‌ನ ಐವರನ್ನು ವಿಡಿಯೋ ವೈರಲ್ ಆದ 24 ಗಂಟೆಗಳಲ್ಲೇ ಗೋಳಗುಮ್ಮಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿಯೇ ನಡುರಸ್ತೆಯಲ್ಲೇ ಯುವತಿಯೊಬ್ಬಳನ್ನು ವಿವಸ್ತ್ರಗೊಳಿಸಿ ಮನಬಂದಂತೆ ಹಲ್ಲೆ ಮಾಡಿದ್ದ ಮಂಗಳಮುಖಿಯರ ಗ್ಯಾಂಗ್‌ನ ಐವರನ್ನು ವಿಡಿಯೋ ವೈರಲ್ ಆದ 24 ಗಂಟೆಗಳಲ್ಲೇ ಗೋಳಗುಮ್ಮಟ ಠಾಣೆ ಪೊಲೀಸರು ಬಂಧಿಸಿದ್ದಾರೆ.ಅಶ್ವಿನಿ, ಹುಲಿಗೆಮ್ಮ, ಕವಿತಾ, ದಾನಮ್ಮ, ಮಾನಮ್ಮ ಎಂಬ ಐವರು ಮಂಗಳಮುಖಿಯರನ್ನು ಬಂಧಿತ ಆರೋಪಿಗಳು. ಸಾರ್ವಜನಿಕರೆದುರೇ ಯುವತಿಯನ್ನು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಹಲ್ಲೆ ಮಾಡಿದ್ದ ವಿಡಿಯೋ ಜು.31ರಂದು ವೈರಲ್ ಆಗಿತ್ತು. ಈ ಘಟನೆ 2024 ಜೂನ್ 21ರಂದೆ ನಡೆದಿದ್ದು, ತಡವಾಗಿ ವೈರಲ್ ಆಗಿದ್ದರಿಂದ ಪೊಲೀಸರು ಇದೀಗ ಕ್ರಮ ಕೈಗೊಂಡಿದ್ದಾರೆ.

ಯುವತಿಯೊಬ್ಬಳನ್ನು ಸಾರ್ವಜನಿಕರ ಎದುರಲ್ಲೇ ಬಟ್ಟೆಬಿಚ್ಚಿ ಮನಬಂದಂತೆ ಥಳಿಸಿದ್ದ ಮಂಗಳಮುಖಿಯರ ಅಟ್ಟಹಾಸಕ್ಕೆ ನಲುಗಿದ್ದ ಯುವತಿ ಇಷ್ಟು ದಿನವಾದರೂ ದೂರು ಕೊಡದೆ ಸುಮ್ಮನಾಗಿದ್ದಳು. ವಿಡಿಯೋ ವೈರಲ್ ಆದ ಬಳಿಕ ಭಯಾನಕ ಘಟನೆ ಬೆಳಕಿಗೆ ಬಂದಿದ್ದು, ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ನೊಂದ ಯುವತಿಗೆ ನ್ಯಾಯ ಕೊಡಲು ಮುಂದಾಗಿರುವ ಪೊಲೀಸರು ಮಂಗಳಮುಖಿಯರ ಗ್ಯಾಂಗ್‌ನ ಐವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಹಲ್ಲೆಗೆ ಕಾರಣವೇನು...?:

ಹಲ್ಲೆಗೊಳಗಾದ ಯುವತಿ ತನ್ನ ಹೆಣ್ತನದಿಂದ ವಿಮುಖಳಾಗಿ ಪುರುಷರಂತೆ ವೇಷಭೂಷಣ ತೊಟ್ಟು, ಅಶ್ವಿನಿ ಎಂಬ ಮಂಗಳಮುಖಿ ಜೊತೆಗೆ ಹಿಂದೆ ಪುಣೆಯಲ್ಲಿ ವಾಸವಿದ್ದಳು. ಆಕೆ ಹೆಣ್ಣೆಂದು ಮಂಗಳಮುಖಿಯರಿಗೆ ಗೊತ್ತಾದಾಗ ಪುಣೆಯಲ್ಲಿಯೇ ಅವಳ ಮೇಲೆ ಹಲ್ಲೆ ಮಾಡಿ ಮರಳಿ ವಿಜಯಪುರಕ್ಕೆ ಕಳುಹಿಸಿದ್ದರು. ವಾಪಸ್ ಬಂದ ಯುವತಿ ಹಲ್ಲೆ ಮಾಡಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಳು. ಇದರಿಂದ ಕೋಪಗೊಂಡ ಏಳೆಂಟು ಮಂಗಳಮುಖಿಯರು ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಆ ಯುವತಿಯನ್ನು ಹಿಡಿದು ಬೆತ್ತಲೆ ಮಾಡಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ್ದರು.

--------------------------------

ಕೋಟ್........

ಯುವತಿಯೊಬ್ಬಳ ಮೇಲೆ ಮಂಗಳಮುಖಿಯರು ನಡೆಸಿರುವ ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನಮ್ಮ ಪೊಲೀಸರು ನೊಂದ ಯುವತಿಯಿಂದ ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ಅಶ್ವಿನಿ, ಹುಲಿಗೆಮ್ಮ, ಕವಿತಾ, ದಾನಮ್ಮ, ಮಾನಮ್ಮ ಎಂಬ ಐವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮಾಡಲಾಗುತ್ತಿದ್ದು, ತನಿಖೆ ನಂತರ ಇನ್ನಷ್ಟು ಮಾಹಿತಿ ಹೊರಬರಲಿದೆ.

- ಋಷಿಕೇಶ ಸೋನಾವಣೆ, ವಿಜಯಪುರ ಎಸ್‌ಪಿ

----------------------------------------------------------

ಕೋಟ್

ನನ್ನ ಮೇಲೆ ಹಲ್ಲೆ ಮಾಡಿ ಮಾನ ಹಾಳು ಮಾಡಿರುವ ಮಂಗಳಮುಖಿಯರ ಬಂಧನ ಆಗಿರುವುದು ಮನಸ್ಸಿಗೆ ಸಮಾಧಾನ ತಂದಿದೆ. ಇನ್ನುಳಿದವರನ್ನೂ ಬೇಗನೆ ಬಂಧಿಸಿ, ಎಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ನಾನು ಅಶ್ವಿನಿ ಎಂಬ ಮಂಗಳಮುಖಿ ಜೊತೆಗೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿದ್ದೆ. ಈ ವೇಳೆ ನಾನು ಗಂಡಲ್ಲ ಹೆಣ್ಣು ಎಂದು ಮಂಗಳಮುಖಿಯರಿಗೆ ಗೊತ್ತಾದಾಗ, ಪುಣೆಯಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದರು. ನಾನು ವಾಪಸ್ ಬಂದು, ಇನ್‌ಸ್ಟಾಗ್ರಾಂನಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರಿಗೆ ಬೈಯ್ದು ವಿಡಿಯೋ ಪೋಸ್ಟ್ ಮಾಡಿದ್ದೆ. ಅದರಿಂದ ಸಿಟ್ಟಾಗಿ ಮಂಗಳಮುಖಿಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.

- ನೊಂದ ಯುವತಿ.