ಎರಡು ದಾಖಲೆಯೊಂದಿಗೆ ವಿಧಾನಸಭೆ ಕಲಾಪ ಅನಿಧಿಷ್ಠಾವಧಿಗೆ ಮುಂದೂಡಿಕೆ

KannadaprabhaNewsNetwork |  
Published : Mar 27, 2026, 01:45 AM IST
ಸದನ | Kannada Prabha

ಸಾರಾಂಶ

ಹದಿಮೂರು ದಿನಗಳಿಂದ ನಡೆಯುತ್ತಿದ್ದ ಬಜೆಟ್ ಅಧಿವೇಶನವು ವಿಧಾನಸಭೆಯಲ್ಲಿ ಎರಡು ದಾಖಲೆಗಳೊಂದಿಗೆ ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹದಿಮೂರು ದಿನಗಳಿಂದ ನಡೆಯುತ್ತಿದ್ದ ಬಜೆಟ್ ಅಧಿವೇಶನವು ವಿಧಾನಸಭೆಯಲ್ಲಿ ಎರಡು ದಾಖಲೆಗಳೊಂದಿಗೆ ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು. ಈ ಬಾರಿ ಒಟ್ಟು 50 ಸದಸ್ಯರು 24 ಗಂಟೆಗೂ ಹೆಚ್ಚು ಕಾಲ ಬಜೆಟ್‌ ಮೇಲೆ ಚರ್ಚೆ ನಡೆಸಿದ್ದು ಒಂದು ದಾಖಲೆಯಾದರೆ, ಮಾ.24ರಂದು ಮಧ್ಯರಾತ್ರಿ 1.42ರವರೆಗೆ ಅಂದರೆ 12 ಗಂಟೆ 41 ನಿಮಿಷ ಕಲಾಪ ನಡೆದಿದ್ದು ಮತ್ತೊಂದು ದಾಖಲೆ.

ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್‌ ಯು.ಟಿ.ಖಾದರ್‌, ಮಾ.6 ರಂದು ಬಜೆಟ್‌ ಮಂಡನೆ ಮೂಲಕ ಆರಂಭಗೊಂಡ ಅಧಿವೇಶನವು 13 ದಿನ 80 ಗಂಟೆ 12 ನಿಮಿಷಗಳ ಕಾಲ ವಿಧಾನಸಭೆ ಕಲಾಪ ನಡೆದಿದೆ. ಈ ಪೈಕಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ 50 ಸದಸ್ಯರು 24 ಗಂಟೆ 45 ನಿಮಿಷಗಳ ಚರ್ಚಿಸಿದ್ದು ಒಂದು ದಾಖಲೆಯಾದರೆ, ಮಾ.24 ರಂದು ಬೆಳಗ್ಗೆ 11.35 ರಿಂದ ಆರಂಭವಾದ ವಿಧಾನಸಭೆ ಕಲಾಪವು ಮಧ್ಯರಾತ್ರಿ 1.42 ರವರೆಗೆ ಅಂದರೆ, 12 ಗಂಟೆ 41 ನಿಮಿಷಗಳ ಕಾಲ ನಡೆದಿದ್ದು ಮತ್ತೊಂದು ದಾಖಲೆಯಾಗಿದೆ. ಸದಸ್ಯರು ಆಸಕ್ತಿಯಿಂದ ಚರ್ಚೆಗಳಲ್ಲಿ ಭಾಗವಹಿಸಿದ್ದು ವಿಶೇಷ. ಬಜೆಟ್‌ ಚರ್ಚೆ ಮೇಲೆ ಮುಖ್ಯಮಂತ್ರಿಯವರು 6 ಗಂಟೆಗಳ ಉತ್ತರ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಪಕ್ಷ ವಹಿಸಿದ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ: ಸ್ಪೀಕರ್‌ ಯು.ಟಿ.ಖಾದರ್‌ನನಗೆ ಸ್ಪೀಕರ್‌ ಸ್ಥಾನ, ಸಚಿವ ಸ್ಥಾನ ಅಂತ ಏನೂ ಇಲ್ಲ. ಯಾವ ಕೆಲಸ ಕೊಟ್ಟರೂ ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಬೇಕು. ಅದನ್ನು ಮಾಡುತ್ತೇನೆ ಎಂದು ಇದೇ ವೇಳೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

ವಿಧಾನಸಭೆ ಅವಧಿ ಪೂರ್ಣಗೊಳ್ಳುವ ಮೊದಲೇ ಶಾಸಕರ ಗ್ರೂಪ್‌ ಫೊಟೋ ತೆಗೆಸಿದ್ದು, ಹಲವು ಚರ್ಚೆಗೆ ಕಾರಣವಾಗಿದೆಯಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಆ ಸ್ಥಾನ, ಈ ಹುದ್ದೆ ಅಂತ ಏನೂ ಇಲ್ಲ. ಯಾವ ಕೆಲಸ ಕೊಟ್ಟರೂ ಪ್ರಾಮಾಣಿಕವಾಗಿ ಮಾಡಿಕೊಂಡು ಹೊಗುತ್ತೇನೆ. ಈಗ ಸ್ಪೀಕರ್‌ ಸ್ಥಾನವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ತೃಪ್ತಿ ಇದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಶಂಕರರ ಜೀವನವೇ ನಮಗೆ ಸಂದೇಶ: ಶ್ರೀ ವಿಜಯ ಗುರೂಜೀ
ವೈರಮುಡಿ ಉತ್ಸವದಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಿ: ಐಜಿಪಿ ಬೋರಲಿಂಗಯ್ಯ ಸೂಚನೆ