ಕನ್ನಡಪ್ರಭ ವಾರ್ತೆ, ವಿಧಾನಸಭೆ
ಸರ್ಕಾರದ ಈ ನಡೆಯಿಂದ ಆಕ್ರೋಶಗೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಕ್ಯಾರೆ ಎನ್ನಲಿಲ್ಲ.
ಗುರುವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ನಿರ್ಣಯದ ವಿಷಯ ಇರಲಿಲ್ಲ. ಸಂಜೆ ಪೂರಕ ಕಾರ್ಯಕಲಾಪಗಳ ಪಟ್ಟಿಯೊಂದಿಗೆ ಈ ನಿರ್ಣಯ ಮಂಡಿಸಲು ಸ್ಪೀಕರ್ ಯು.ಟಿ.ಖಾದರ್ ಸರ್ಕಾರಕ್ಕೆ ಅವಕಾಶ ನೀಡಿದರು. ಇದರಿಂದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಈ ಸಂಬಂಧದ ಅಧಿಕೃತ ನಿರ್ಣಯವನ್ನು ಮಂಡಿಸಿದರು.ಸರ್ಕಾರದ ಈ ನಿಲುವಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಎಲ್ಲ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವಿರೋಧದ ನಡುವೆಯೇ ಸಚಿವರು ನಿರ್ಣಯವನ್ನು ಓದಲಾರಂಭಿಸಿದರು. ಇದರಿಂದ ಕೆರಳಿ ಕೆಂಡವಾದ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ನಿರ್ಣಯದ ಪ್ರತಿಗಳನ್ನು ಹರಿದು ಹಾಕಿ ತಮ್ಮ ಸಿಟ್ಟು ಹೊರಹಾಕಿದರು. ಅಲ್ಲದೆ, ಕಾರ್ಯಕಲಾಪಗಳ ಪಟ್ಟಿಯಲ್ಲಿ ಇಲ್ಲದ ವಿಷಯವನ್ನು ಯಾವುದೇ ಮಾಹಿತಿ ನೀಡದೆ ತರಲು ಹೇಗೆ ಅವಕಾಶ ನೀಡಿದಿರಿ ಎಂದು ಸಭಾಧ್ಯಕ್ಷರ ಪೀಠದ ಮುಂದೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಇದು ಕದ್ದು ಮುಚ್ಚಿ ನಿರ್ಣಯ ತಂದ ಹೇಡಿ ಸರ್ಕಾರ, ದೇಶದ್ರೋಹಿ ಕಾಂಗ್ರೆಸ್, ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಕಿಡಿ ಕಾರಿದರು.ಈ ಪ್ರತಿಭಟನೆ, ಗದ್ದಲ, ಕೋಲಾಹಲದ ನಡುವೆಯೇ ಸಚಿವ ಎಚ್.ಕೆ.ಪಾಟೀಲ್ ಪೂರ್ಣ ನಿರ್ಣಯವನ್ನು ಓದಿ, ಸರ್ವಾನುಮತದಿಂದ ಇದನ್ನು ಅಂಗೀಕರಿಸುವಂತೆ ಪ್ರಸ್ತಾವನೆ ಮಂಡಿಸಿದರು. ಬಳಿಕ ಸ್ಪೀಕರ್ ಯು.ಟಿ.ಖಾದರ್ ನಿರ್ಣಯವನ್ನು ಸದನದ ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.ಇದರ ಬೆನ್ನಲ್ಲೇ ರೈತರ ಎಲ್ಲಾ ಬೆಳಗೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಶಾಸಕ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಮತ್ತೊಂದು ನಿರ್ಣಯವನ್ನೂ ಮಂಡಿಸಿ ಅನುಮೋದನೆ ಪಡೆಯಲಾಯಿತು. ಬಳಿಕ ಸ್ಪೀಕರ್ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.ಸದನ ಮುಂದೂಡಿದ ಬಳಿಕ ಸ್ಪೀಕರ್ ಯು.ಟಿ.ಖಾದರ್ ತಮ್ಮ ಕಚೇರಿಯಲ್ಲಿ ಆಡಳಿತದ ಕೆಲ ಸಚಿವರು ಮತ್ತು ಪ್ರತಿಪಕ್ಷ ನಾಯಕರು ಹಾಗೂ ಕೆಲ ಪ್ರಮುಖ ಸದಸ್ಯರೊಂದಿಗೆ ಸಂಧಾನಕ್ಕೆ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ.----
14 ಮತ್ತು 15ನೇ ಹಣಕಾಸು ಆಯೋಗಗಳ ಪರಸ್ಪರ ವಿರೋಧಾಭಾಸದ ತೀರ್ಮಾನಗಳಿಂದಾಗಿ ಕಳೆದ 3 ವರ್ಷಗಳಿಂದ ಕರ್ನಾಟಕಕ್ಕೆ ವಾರ್ಷಿಕ 26,140 ಕೋಟಿ ರು.ಗಳ ನಷ್ಟ ಉಂಟಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ದೊರಕಬೇಕಾದ ಅನುದಾನ ಕೂಡ ಗಣನೀಯವಾಗಿ ಕಡಿತಗೊಂಡಿದೆ. 2018-19ಕ್ಕೆ ಹೊಲಿಸಿದರೆ 2023-24ರಲ್ಲಿ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಈ ಲೆಕ್ಕದಲ್ಲಿ ನೋಡಿದರೂ ಕನಿಷ್ಠ ಒಂದು ಲಕ್ಷ ಕೋಟಿ ರು.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ರಾಜ್ಯಕ್ಕೆ ಅನುದಾನ ದೊರಕಬೇಕಾಗಿತ್ತು. ಆದರೆ ಕರ್ನಾಟಕಕ್ಕೆ 50,000 ಕೋಟಿ ರು. ಸಹ ದೊರಕುತ್ತಿಲ್ಲ. ಅವೈಜ್ಞಾನಿಕ ಜಿಎಸ್ಟಿ ವ್ಯವಸ್ಥೆ, ಸೆಸ್ ಮತ್ತು ಸರ್ಚಾರ್ಜ್‌ಗಳ ಹೇರಿಕೆ, ತೆರಿಗೆ ಪಾಲಿನಲ್ಲಿ ವಂಚನೆ, 15 ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಕೊಡದೆ 2017-18 ರಿಂದ ನಮಗೆ 1,87,867 ಕೋಟಿ ರು. ನಷ್ಟವಾಗಿದೆ. ಬರ ಮತ್ತು ನೆರೆ ಪರಿಹಾರಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಈ ಸದನ ಒಕ್ಕೊರಲಿನಿಂದ ಖಂಡಿಸುತ್ತದೆ. ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ, ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕೆಂದು ಮತ್ತು ಕರ್ನಾಟಕ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಈ ಸದನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ.