ದತ್ತಮಾಲಾ ಅಭಿಯಾನಕ್ಕೆ 48 ಮಂದಿ ವಿಶೇಷ ದಂಡಾಧಿಕಾರಿಗಳ ನಿಯೋಜನೆ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ದತ್ತಮಾಲಾ ಅಭಿಯಾನಕ್ಕೆ 48 ಮಂದಿ ವಿಶೇಷ ದಂಡಾಧಿಕಾರಿಗಳ ನಿಯೋಜನೆ

32 ಚೆಕ್‌ ಪೋಸ್ಟ್‌। ನಾಳೆಯಿಂದ ಕರ್ತವ್ಯಕ್ಕೆ ಹಾಜರ್‌ । ಇಂದು ಸಂಜೆಯೊಳಗೆ ರಿಪೋರ್ಟ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀರಾಮ ಸೇನೆ ಆಯೋಜಿಸಿರುವ ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ತಕ್ಷಣ ಕ್ರಮ ಕೈಗೊಳ್ಳಲು 48 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜನೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.ಈ ಎಲ್ಲಾ ಅಧಿಕಾರಿಗಳು ನ. 3 ರಂದು ಸಂಜೆ 4 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಜರಾಗಿ. ನ. 4 ಮತ್ತು 5 ರಂದು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು.ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಚಿಕ್ಕಮಗಳೂರಿನ ದತ್ತಪೀಠಕ್ಕೆ ಬರುವ ಮಾರ್ಗಗಳಲ್ಲಿ 32 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಓರ್ವ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಇವರ ಜತೆಗೆ ಪೊಲೀಸ್ ಸಿಬ್ಬಂದಿ, ಗ್ರಾಮ ಪಂಚಾಯ್ತಿ ಪಿಡಿಒಗಳನ್ನು ನಿಯೋಜಿಸಲಾಗಿದೆ. 16 ಮಂದಿ ರಿಸರ್ವ್‌ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ಸಂಚಾರ ಮಾರ್ಗ ಬದಲು: ದತ್ತ ಮಾಲಾ ಅಭಿಯಾನದ ಹಿನ್ನಲೆಯಲ್ಲಿ ನ. 5 ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಮೆರವಣಿಗೆ ಇರುವುದರಿಂದ ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು, ದತ್ತ ಭಕ್ತರು ಭಾಗವಹಿಸುವುದರಿಂದ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಲಿದೆ. ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರು ಸುಗಮ ಸಂಚಾರಕ್ಕಾಗಿ ನಗರದಲ್ಲಿ ಕೆ.ಎಂ. ರಸ್ತೆ ಮುಖಾಂತರ ಸಂಚರಿಸುವ ಹಾಗೂ ಕಡೂರು ಕಡೆಯಿಂದ ಮೂಡಿಗೆರೆ ಕಡೆಗೆ ಹೋಗುವ ಭಾರಿ ವಾಹನಗಳು ಎಐಟಿ ಸರ್ಕಲ್, ಬೈಪಾಸ್, ಪೈ ಸರ್ಕಲ್, ಹಿರೇಮಗಳೂರು, ಕೈಗಾರಿಕಾ ಪ್ರದೇಶ, ರಾಂಪುರ ಮೂಲಕ ಸಾಗಬೇಕು. ಮೂಡಿಗೆರೆ ಕಡೆಯಿಂದ ಕಡೂರು ಕಡೆಗೆ ಹೋಗುವ ಭಾರಿ ವಾಹನಗಳು ರಾಂಪುರ, ಕೈಗಾರಿಕಾ ಪ್ರದೇಶ, ಹಿರೇಮಗಳೂರು, ಪೈ ಸರ್ಕಲ್, ಬೈಪಾಸ್, ಎಐಟಿ ಸರ್ಕಲ್ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಾಹನಗಳ ನಿಲುಗಡೆ, ಸಂಚಾರ ನಿಷೇಧ: ನ. 5 ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಇರುವುದರಿಂದ ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯ ದತ್ತ ಮಾಲಾಧಾರಿಗಳು, ದತ್ತ ಭಕ್ತರು ಭಾಗವಹಿಸಲಿದ್ದಾರೆ. ಶೋಭಾಯಾತ್ರೆ ಮೆರವಣಿಗೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಶಂಕರಮಠದಿಂದ ಪ್ರಾರಂಭವಾಗಿ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮುಖಾಂತರ ಅಜಾದ್ ಪಾರ್ಕ್ ವೃತ್ತದ ವರೆಗೆ ನಡೆಯಲಿದೆ.

ಅಂದು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ಬಸವನಹಳ್ಳಿ ಮುಖ್ಯ ರಸ್ತೆ, (ಕೆ ಇ ಬಿ ಈದ್ಗಾ ಸರ್ಕಲ್‌ನಿಂದ ಹನುಮಂತಪ್ಪ ವೃತ್ತದವರೆಗೆ ) ಎಂಜಿ ರಸ್ತೆ (ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವೃತ್ತದವರೆಗೆ) ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕ ವಾಹನಗಳು ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ರತ್ನಗಿರಿ ರಸ್ತೆ (ಆರ್.ಜಿ. ರಸ್ತೆ) ಯಲ್ಲಿ ಸಂಚರಿಸುವುದು. ಎಂಜಿ ರಸ್ತೆಯಲ್ಲಿ ಸಾಗುವ ವಾಹನಗಳು ಐಜಿ ರಸ್ತೆ ಮತ್ತು ಅಂಬೇಡ್ಕರ್ ರಸ್ತೆ (ಮಾರ್ಕೆಟ್ ರಸ್ತೆಯಲ್ಲಿ) ಸಂಚರಿಸುವಂತೆ ಡಿಸಿ ಸೂಚಿಸಿದ್ದಾರೆ. 2 ಕೆಸಿಕೆಎಂ 6ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ದತ್ತಪೀಠ.

Share this article