ಬೆಳೆಹಾನಿ ಸಮೀಕ್ಷೆಯಲ್ಲಿ ಲೋಪವಾಗದಂತೆ ಎಚ್ಚರವಹಿಸಿ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಬೆಳೆಹಾನಿ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಬಾರದು. ಸಮೀಕ್ಷೆ ಕಾರ್ಯ ಪೂರ್ಣಗೊಂಡು ಪರಿಹಾರ ನೀಡುವ ಸಂದರ್ಭ ಕೆಲ ರೈತರು ಕೈಬಿಟ್ಟು ಹೋಗಿದೆ, ಸೇರಿಸಿ ಎಂಬ ಮನವಿ ಸ್ವೀಕರಿಸುವುದಿಲ್ಲ. ಸೇರ್ಪಡೆಗೆ ಅವಕಾಶವಿಲ್ಲ. ಅದಕ್ಕಾಗಿ ಕ್ರಾಸ್ ಸರ್ವೇ ಮಾಡಿ ಅಪ್‌ಡೇಟ್ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.

ಸಚಿವ ಕೃಷ್ಣ ಬೈರೇಗೌಡ ಸೂಚನೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಖಾಸಗಿ ಬೋರವೆಲ್ ಮಾಲೀಕರೊಂದಿಗೆ ಕರಾರಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಹಾವೇರಿ

ಬೆಳೆಹಾನಿ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಬಾರದು. ಸಮೀಕ್ಷೆ ಕಾರ್ಯ ಪೂರ್ಣಗೊಂಡು ಪರಿಹಾರ ನೀಡುವ ಸಂದರ್ಭ ಕೆಲ ರೈತರು ಕೈಬಿಟ್ಟು ಹೋಗಿದೆ, ಸೇರಿಸಿ ಎಂಬ ಮನವಿ ಸ್ವೀಕರಿಸುವುದಿಲ್ಲ. ಸೇರ್ಪಡೆಗೆ ಅವಕಾಶವಿಲ್ಲ. ಅದಕ್ಕಾಗಿ ಕ್ರಾಸ್ ಸರ್ವೇ ಮಾಡಿ ಅಪ್‌ಡೇಟ್ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೆಳೆ ಹಾಗೂ ರೈತನ ಸರ್ವೇ ವಿವರ, ಬೆಳೆಹಾನಿ ವಿಸ್ತೀರ್ಣವನ್ನು ಫ್ರೂಟ್ ಐಡಿಯಲ್ಲಿ ಸೆರೆಹಿಡಿದು ಅಪ್‌ಲೋಡ್ ಮಾಡಬೇಕು. ಬೆಳೆ ವಿವರ ತಪ್ಪಾಗಿ ದಾಖಲಾಗಿದ್ದರೆ ಸರಿಪಡಿಸಬೇಕು. ಆರ್‌ಟಿಸಿಗಳಿಗೆ ಆಧಾರ್ ಲಿಂಕ್ ಆಗಬೇಕು. ತಕ್ಷಣ ಎಲ್ಲವನ್ನೂ ಸರಿಪಡಿಸಿ ನಿಖರವಾದ ರೈತರ ಬೆಳೆ ಮಾಹಿತಿ, ವಿಸ್ತೀರ್ಣ ದಾಖಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಪೋಡಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಆಂದೋಲನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತ್ಯರ್ಥಪಡಿಸಬೇಕು. ಏಕ ವ್ಯಕ್ತಿ ಪೋಡಿ ಪ್ರಕರಣದಲ್ಲಿ ಅವರು ವ್ಯಕ್ತಿಗತವಾಗಿ ಅರ್ಜಿ ಸಲ್ಲಿಸಬೇಕು ಎಂಬ ಮನೋಧೋರಣೆಯಿಂದ ಎಲ್ಲ ತಹಸೀಲ್ದಾರಗಳು ಹೊರಬರಬೇಕು. ಸಾರ್ವಜನಿಕರಿಗೆ ತ್ವರಿತವಾಗಿ ಸ್ಪಂದಿಸುವಂತೆ ತಾಕೀತು ಮಾಡಿದರು.

ಬಗರಹುಕುಂ ವಿಲೇವಾರಿ:

ಬಗರಹುಕುಂ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುವ ಕುರಿತಂತೆ ತ್ವರಿತವಾಗಿ ಬಗರಹುಕುಂ ಕಮೀಟಿಗಳನ್ನು ರಚಿಸಬೇಕಾಗಿದೆ. ಎಲ್ಲ ಜನಪ್ರತಿನಿಧಿಗಳು ಸಮಿತಿ ಸದಸ್ಯರ ವಿವರಗಳನ್ನು ಸಲ್ಲಿಸಬೇಕು. ಫಾರಂ ೫೭ರಡಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ ಜಮೀನಿನ ಹಕ್ಕುಪತ್ರ ನೀಡುವ ಕಾರ್ಯ ಆರು ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಆರಂಭದಲ್ಲೇ ಸೂಚನೆ ನೀಡಿದ್ದರು. ಈಗಾಗಲೇ ಐದು ತಿಂಗಳು ಪೂರ್ಣಗೊಂಡಿದೆ. ಬಡವರಿಗೆ ಸಹಾಯಮಾಡುವುದು ನಮ್ಮ ಸಂಕಲ್ಪವಾಗಿದೆ. ಈ ತಿಂಗಳಾಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಬೇಕು. ಅರ್ಹರಿಗೆ ಡಿಜಿಟಿಲ್ ಸಾಗುವಳಿಪತ್ರ ನೀಡಬೇಕು ಹಾಗೂ ಹಂಚಿಕೆಯಾದ ಜಮೀನನ ಮಾಲೀಕತ್ವ ನೋಂದಣಿ ಮಾಡಿಸಿಕೊಡಬೇಕು. ಈ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.

ಕಂದಾಯ ಗ್ರಾಮ ರಚನೆ:

ತಾಂಡಾ ಉಪ ಗ್ರಾಮ ಹಾಗೂ ಕಂದಾಯ ಗ್ರಾಮಗಳ ರಚನೆಯ ಬಗ್ಗೆ ತಹಶೀಲ್ದಾರಗಳು ನೀಡಿದ ಮಾಹಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕಂದಾಯ ಸಚಿವರು, ಸರ್ಕಾರದ ಮಾರ್ಗಸೂಚಿಯಂತೆ ಕಂದಾಯ ಗ್ರಾಮಗಳು ರಚನೆಯಾಗಬೇಕು. ಈ ನಿಟ್ಟಿನಲ್ಲಿ ಸರಿಯಾಗಿ ನೋಟಿಫಿಕೇಷನ್ ಹೊರಡಿಸಲು ಪುನರ್ ಪರಿಶೀಲನೆ ಮಾಡಿ, ಯಾರಿಗೂ ತೊಂದರೆಯಾಗಬಾರದು. ಹಾಗೆ ಗ್ರಾಮಗಳ ವಿಸ್ತರಿಸಿ ಉಪಗ್ರಾಮಗಳ ರಚನೆ, ಖಾಸಗಿ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಿಕೆ ಕುರಿತಾಗಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು.

ಬಿ ಕರಾಬ್ ಜಮೀನಿನ ಮಂಜೂರಾತಿ ಕುರಿತಂತೆ ಸರ್ಕಾರದ ಆದೇಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿ. ಯಾವ ಯಾವ ತಾಲೂಕಿನಲ್ಲಿ ಎಷ್ಟು ಬಿ ಕರಾಬ್ ಜಮೀನುಗಳು ಇವೆ ಎಂಬುದರ ಬಗ್ಗೆ ಮಾಹಿತಿ ಸಲ್ಲಿಸಲು ಸೂಚನೆ ನೀಡಿದರು. ಜಮೀನುಗಳಲ್ಲಿ ದಾರಿ ಸಮಸ್ಯೆ, ಗ್ರಾಮ ನಕಾಶೆಗಳಲ್ಲಿ ಇಲ್ಲದಿದ್ದರೂ ಹೊಲಗಳಿಗೆ ಹೋಗಲು ಪಾರಂಪರಿಕ ಕಾಲುದಾರಿ ಹಾಗೂ ಬಂಡಿ ದಾರಿಗಳಲ್ಲಿ ಸಾಗಲು ಅಡ್ಡಿಪಡಿಸುವ ಪ್ರಕರಣಗಳನ್ನು ಸಿಆರ್‌ಪಿಸಿ ಅಡಿಯಲ್ಲಿ ತಹಶೀಲ್ದಾರಗಳು ಖುದ್ದಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಹಿಸ್ಸಾ ಹಾಗೂ ಪೋಡಿ ಪ್ರಕರಣಗಳಲ್ಲಿ ಜಮೀನು ವಿಭಾಗಮಾಡಿಕೊಂಡು ನೋಂದಣಿ ಮಾಡಿಸಿಕೊಳ್ಳುವ ಪೂರ್ವದಲ್ಲಿ ಓಡಾಡಲು ದಾರಿಗೆ ಅವಕಾಶ ಮಾಡಿಕೊಡಬೇಕು. ಹಾಗೂ ಬಗರಹುಕುಂ ಜಮೀನು ಮಂಜೂರು ಮಾಡುವಾಗ ಜಮೀನಿಗೆ ತೆರಳಲು ದಾರಿಯನ್ನು ಕಳೆದು ಹಕ್ಕುಪತ್ರ ನೀಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಕಂದಾಯ ಇಲಾಖೆ ದೊಡ್ಡ ಜವಾಬ್ದಾರಿ ಇರುವ ಇಲಾಖೆ. ಎಲ್ಲರ ಮೇಲೆ ಪರಿಣಾಮ ಬೀರುವ ಇಲಾಖೆ, ಸರ್ಕಾರಕ್ಕೆ ಮಾತೃ ಇಲಾಖೆ, ಎಲ್ಲರ ಮೇಲೆ ಪ್ರಭಾವ ಬೀರುವ ಇಲಾಖೆ. ಕಂದಾಯ ಇಲಾಖೆ ಸರಿಯಾಗಿ ಕೆಲಸಮಾಡಿದರೆ ಜನ ನೆಮ್ಮದಿಯಿಂದ ಬದುಕಲು ಸಾಧ್ಯ. ಸಾರ್ವಜನಿಕರ ಯಾವುದೇ ಒಂದು ಸಣ್ಣ ಪ್ರಕರಣ ವಿಳಂಬ ಮಾಡಿದರೆ ಆ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರಕ್ಕೆ ಇಡಾಗುತ್ತದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನೀರಿನ ಸಮಸ್ಯೆ:

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಮಾಲೀಕರೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಿ. ಸರ್ಕಾರದ ಹಂತದಲ್ಲಿ ಈ ವರ್ಷ ಖಾಸಗಿ ಕೊಳವೆಬಾವಿಗಳ ಮಾಸಿಕ ಬಾಡಿಗೆ ದರವನ್ನು ಹೆಚ್ಚಳಮಾಡಲು ಕ್ರಮವಹಿಸಲಾಗುವುದು. ಹೊಸ ಕೊಳವೆಬಾವಿಗಳ ಬದಲು ಖಾಸಗಿ ಕೊಳವೆಬಾವಿಗಳಿಗೆ ಪೈಪ್‌ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಮಾತನಾಡಿ, ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ಕರೆಯಬೇಕು. ನಾವೆಲ್ಲ ಭಾಗವಹಿಸುತ್ತೇವೆ . ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿಕೊಂಡರು.

ಮೇ, ಜೂನ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಸರಿಯಾಗಿ ಕ್ರಮವಹಿಸಿ. ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಹಂತದಲ್ಲೇ ಪರಿಹಾರ ಒದಗಿಸಬೇಕು. ಜನಪ್ರತಿನಿಧಿಗಳ ಬಳಿ ಜನರನ್ನು ಕಳುಹಿಸುವ ಮನೋಭಾವ ಅಧಿಕಾರಿಗಳು ಕೈ ಬಿಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ್‌ಕುಮಾರ, ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣನವರ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಇತರರು ಉಪಸ್ಥಿತರಿದ್ದರು.

Share this article