ದಾಂಡೇಲಿ: ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಕಾರ್ಮಿಕರ ಭವನದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ದಾಂಡೇಲಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶೆ ರೋಹಿಣಿ ಡಿ. ಬಸಾಪುರ, ಕುರುಡು ಕಾಂಚಾಣದ ನರ್ತನ ಪ್ರತಿ ಇಲಾಖೆಯ ಕಚೇರಿಯಲ್ಲಿ ವೇದಿಕೆ ನೀಡಿದೆ. ಲಂಚ ಪಡೆಯುವ ಅಧಿಕಾರಿ ಆ ಹಣ ಬಡವನ ಕಣ್ಣೀರು ಎನ್ನುವ ಪರಿಜ್ಞಾನ ಇರಬೇಕು. ಭ್ರಷ್ಟಾಚಾರ ಆಲದ ಮರದಂತೆ ಹಬ್ಬಿದೆ. ಅಧಿಕಾರಿಗಳ ಪ್ರಾಮಾಣಿಕ ಕೆಲಸದ ಬದ್ಧತೆ, ಇಲಾಖೆಯ ಬದ್ಧತೆ ತೋರಿಸುತ್ತದೆ. ಅನ್ಯಾಯ ಎದುರಿಸುವ ಮಾನಸಿಕ ಸ್ಥಿತಿ ಜನಸಾಮಾನ್ಯರಲ್ಲಿ ಉಂಟಾಗಬೇಕು. ಲಂಚದ ಹಣದಿಂದ ಹೆಂಡತಿ, ಮಕ್ಕಳನ್ನು ಸಾಕುವ ಸ್ಥಿತಿ ಯಾವ ಸರ್ಕಾರಿ ನೌಕರನಿಗೆ ಬರಬಾರದು. ಲಂಚ ಕೊಡುವುದು ತಪ್ಪು ಪಡೆಯುವುದು ತಪ್ಪು. ಸಾರ್ವಜನಿಕರಿಗೆ ಇದರ ತಿಳಿವಳಿಕೆ ಬಂದಾಗ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದರು. ಆನಂತರ ಪ್ರತಿಜ್ಞಾ ವಿಧಿ ಬೋಧಿಸಿದರು. ನ್ಯಾಯವಾದಿ ಎಂ.ಸಿ. ಹೆಗಡೆ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅಧಿಕಾರಿಗಳ ಹಾಗೂ ಸಾರ್ವಜನಿಕ ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಕೀಲರ ಸಂಘದ ಪದಾಧಿಕಾರಿಗಳು ಭ್ರಷ್ಟಾಚಾರ ವಿರುದ್ಧದ ನಾಟಕ ಗಮನ ಸೆಳೆಯಿತು. ಈ ವೇಳೆ ಪೌರಾಯುಕ್ತ ರಾಜಾರಾಮ ಪವಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್. ಕುಲಕರ್ಣಿ, ಬಿಇಒ ಪ್ರಮೋದ ಮಹಾಲೆ, ತಾಪಂ ಇಒ ಪ್ರಕಾಶ ಹಾಲಮ್ಮನವರ, ಸರ್ಕಾರಿ ನ್ಯಾಯಾಲಯ ಅಭಿಯೋಜಕ ಶಿವರಾಯ ಎಚ್. ದೇಸಾಯಿ, ಅಣಶಿ ವನ್ಯಜೀವಿ ಉಪ ವಿಭಾಗದ ಅಧಿಕಾರಿ ವಿ.ಎಂ. ಅಮರಾಕ್ಷ, ವೈದ್ಯಾಧಿಕಾರಿ ಅನಿಲಕುಮಾರ ನಾಯ್ಕ, ಸಿಡಿಪಿಒ ಡಾ. ಲಕ್ಷ್ಮಿದೇವಿ, ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಜನಿಕಾಂತ ಹಮಾನಿ, ಕೆಆರ್‌ಸಿಟಿ ವ್ಯವಸ್ಥಾಪಕ ಎಲ್.ಎಚ್. ರಾಠೋಡ, ಅಬಕಾರಿ ನಿರೀಕ್ಷಕರು, ಕಂದಾಯ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು. ನ್ಯಾಯವಾದಿ ಎಲ್.ಸಿ. ನಾಯ್ಕ ಸ್ವಾಗತಿಸಿದರು. ಸಿಆರ್‌ಪಿ ಲಲಿತಾ ಪುಟ್ಟೇಗೌಡ್ರ ನಿರೂಪಿಸಿದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷೆ ರೇಷ್ಮಾ ಬಾವಾಜಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ದಾಂಡೇಲಿ ನ್ಯಾಯಾಲಯ ಆವರಣದಿಂದ ಪ್ರಾರಂಭವಾದ ಬೈಕ್ ಜಾಥಾ ಭ್ರಷ್ಟಾಚಾರ ವಿರೋಧಿ ಘೋಷ ವಾಕ್ಯಗಳ ನಾಮಫಲಕ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಮಿಕ ಭವನದಲ್ಲಿ ಸಂಪನ್ನಗೊಂಡಿತು.