ಹಾವೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಜಿಲ್ಲೆಯಲ್ಲಿ ದೋಷರಹಿತ ಮತದಾರರ ಪಟ್ಟಿ ತಯಾರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಜಿಲ್ಲೆಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 13,36,130 ಮತದಾರರಿದ್ದಾರೆ. ಪ್ರತಿ ಮತಗಟ್ಟೆಗೆ ಬೂತ್ ಲೇವಲ್ ಆಫೀಸರ್ ನೇಮಕ ಮಾಡಲಾಗಿದ್ದು, ಬಿಎಲ್‌ಒಗಳ ಮೇಲುಸ್ತುವಾರಿಗೆ ಸೂಪರ್‌ವೈಸರ್ ನೇಮಕ ಮಾಡಲಾಗಿದೆ. ಬೂತ್‌ವಾರು ಶುದ್ಧ ಮತದಾರರ ಪಟ್ಟಿ ಮತ್ತು ಮ್ಯಾಪಿಂಗ್ ಕಾರ್ಯಕ್ಕೆ ಸಹಕರಿಸಲು ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವಂತೆ ಈಗಾಗಲೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ. ಮನೆಗೆ ಬರುವ ಬಿಎಲ್‌ಒಗಳಿಗೆ ಮತದಾರರು ಅಗತ್ಯ ಸಹಕಾರ ನೀಡಬೇಕು. ಎಸ್ಐಆರ್ ಕುರಿತು ಸಾರ್ವಜನಿಕರಲ್ಲಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಆಯಾ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಫೆಸಿಲಿಟೇಷನ್ ಸೆಂಟರ್ ಸ್ಥಾಪನೆ: 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿ ಮ್ಯಾಪಿಂಗ್ ಮಾಡಿ ಎಸ್.ಐ.ಆರ್. ಕಾರ್ಯ ತೀವ್ರಗೊಳಿಸಲು ಬಿಎಲ್‌ಒ ಹಂತದಲ್ಲಿ ಫೆಸಿಲಿಟೇಷನ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದೆ. ಗ್ರಾಮೀಣ ವಿಭಾಗದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದೆ. ಬಿಎಲ್‌ಒ ಮತ್ತು ಬಿಎಲ್ಎಗಳು ಇದರ ಸದುಪಯೋಗ ಪಡೆದು ಪರಸ್ಪರ ಸಮನ್ವಯದಿಂದ ಎಸ್ಐಆರ್ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ನಾಗರಾಜ ಇದ್ದರು.ರಾಜಕೀಯ ಪಕ್ಷಗಳಿಂದ ಬಿಎಲ್‌ಎ ನೇಮಕ: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜಕೀಯ ಪಕ್ಷಗಳಿಗೆ ಬಿಎಲ್‌ಎಗಳನ್ನು ನೇಮಕ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಸೇರಿ 1482 ಮತಗಟ್ಟೆಗಳಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 1482 ಬೂತ್ ಲೆವಲ್ ಏಜೆಂಟರನ್ನು ನೇಮಿಸಿವೆ. ಜೆಡಿಎಸ್‌ನಿಂದ ರಾಣಿಬೆನ್ನೂರು ಕ್ಷೇತ್ರದ 266 ಬೂತ್‌ಗಳಿಗೆ ಬಿಎಲ್‌ಎಗಳು ನೇಮಕಗೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.