ಕಣ್ಮರೆಯಾದ ಜಿಲ್ಲೆಯ ಕೆರೆ-ಕಟ್ಟೆಗಳು!

KannadaprabhaNewsNetwork |  
Published : Jun 05, 2026, 02:15 AM IST
ಹೂವಿನಹಡಗಲಿ ತಾಲೂಕಿನ ಹರವಿ ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದ ಜಮೀನು ಸಂರಕ್ಷಣೆ ಮಾಡಬೇಕೆಂದು ಉಪ ವಿಭಾಗಾಧಿಕಾರಿ ಟಿ.ಸುರೇಶಕುಮಾರ ಇವರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ನದಿ ಮೂಲವಿಲ್ಲದ ಧಾರವಾಡ ಜಿಲ್ಲೆಗೆ ಈ ಕೆರೆ-ಕಟ್ಟೆಗಳು ಹಾಗೂ ಹಳ್ಳಗಳೇ ಪ್ರಮುಖ ಜಲಮೂಲಗಳಾಗಿದ್ದವು. ಅದರಲ್ಲೂ ಕೃಷಿ, ಇತರ ಕೆಲಸ-ಕಾರ್ಯಗಳಿಗೆ ಇಡೀ ಜಿಲ್ಲೆಗೆ ಕೆರೆಗಳ ಪಾತ್ರವೇ ದೊಡ್ಡದು.

ಬಸವರಾಜ ಹಿರೇಮಠ

ಧಾರವಾಡ:

ಜಿಲ್ಲೆಯ ಯಾವುದೇ ಹಳ್ಳಿಗೆ ಹೋದರೆ ಈ ಮೊದಲು ಸಣ್ಣ ಕೆರೆ, ದೊಡ್ಡ ಕೆರೆ, ಕೆಂಪಗೇರಿ, ಹೊಸಗೇರಿ ಎಂದೆಲ್ಲ ಒಂದಿಲ್ಲೊಂದು ಹೆಸರಿನ ಕೆರೆಗಳಿರುತ್ತಿದ್ದವು. ಆದರೀಗ ಆ ಕೆರೆಗಳ ಹೆಸರಿನ ಬಡಾವಣೆಗಳಿವೆ. ಕೆರೆ ಮಾತ್ರ ಕಣ್ಮರೆಯಾಗಿದೆ!

ನದಿ ಮೂಲವಿಲ್ಲದ ಧಾರವಾಡ ಜಿಲ್ಲೆಗೆ ಈ ಕೆರೆ-ಕಟ್ಟೆಗಳು ಹಾಗೂ ಹಳ್ಳಗಳೇ ಪ್ರಮುಖ ಜಲಮೂಲಗಳಾಗಿದ್ದವು. ಅದರಲ್ಲೂ ಕೃಷಿ, ಇತರ ಕೆಲಸ-ಕಾರ್ಯಗಳಿಗೆ ಇಡೀ ಜಿಲ್ಲೆಗೆ ಕೆರೆಗಳ ಪಾತ್ರವೇ ದೊಡ್ಡದು. ಆದರೆ, ಈ ಜಲಮೂಲದ ಮೇಲಿನ ನಿಷ್ಕಾಳಜಿಯಿಂದಾಗಿ ಜಿಲ್ಲೆಯ ಕೆರೆ, ಹಳ್ಳಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ದುರಂತ ಎಂದರೆ, ಕುಡಿಯಲು ಬಳಸುತ್ತಿದ್ದ ಬಾವಿಗಳಿಂತೂ ಈಗ ಸಂಪೂರ್ಣವಾಗಿ ಕಾಣೆಯಾಗಿವೆ.

ಕೆರೆ, ಬಾವಿ ಹಾಗೂ ಹಳ್ಳಗಳ ಮಹತ್ವ ಗೊತ್ತಿದ್ದರೂ ಅವುಗಳನ್ನು ಉಳಿಸಿಕೊಳ್ಳಲು ಯಾವುದೇ ವಿಶೇಷ ಪ್ರಯತ್ನಗಳು ನಡೆಯುತ್ತಿಲ್ಲ. ಹೀಗಾಗಿ ಪರಿಸರದ ಸಮತೋಲನ ಹಾಗೂ ಕೃಷಿ ಮತ್ತು ಜೀವನೋಪಾಯಕ್ಕೆ ಅಪಾಯ ಬಂದಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಕುಸಿದ ಕೆರೆಗಳ ಸಂಖ್ಯೆ:

ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1,250 ಕೆರೆಗಳಿದ್ದವು. ಒಟ್ಟು 15 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದವು. ಈ ಜಲಮೂಲಗಳು ಕೃಷಿ, ಅಂತರ್ಜಲ ಮರುಪೂರಣ, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ಆದರೆ, ಪಕ್ಕದ ಜಿಲ್ಲೆಯ ಮಲಪ್ರಭೆ ಕುಡಿಯುವ ನೀರಿನ ಸುವ್ಯವಸ್ಥೆಯ ಪರಿಣಾಮ ಹಾಗೂ ಕೆರೆಗಳ ಮೇಲಿನ ನಿರಂತರ ನಿರ್ಲಕ್ಷ್ಯದಿಂದ ಕಳೆದ ದಶಕದ ಅವಧಿಯಲ್ಲಿ ಕೆರೆಗಳ ಸಂಖ್ಯೆ ತೀರಾ ಕುಸಿದಿದೆ. ಇದು ಕೃಷಿ, ಅಂತರ್ಜಲ ಲಭ್ಯತೆ ಮತ್ತು ಜಿಲ್ಲೆಯ ಪರಿಸರ ಸಮತೋಲನದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.

ಅತಿಕ್ರಮಣ:

ಜಿಲ್ಲೆಯ 1,250 ಕೆರೆಗಳ ಪೈಕಿ ಕೇವಲ 250 ಮಾತ್ರ ಪ್ರಸ್ತುತ ಉತ್ತಮ ಸ್ಥಿತಿಯಲ್ಲಿವೆ. ಉಳಿದ ಸಾವಿರ ಕೆರೆಗಳ ಪೈಕಿ ಕೆಲವು ಬರೀ ಕಾಗದದ ಮೇಲಿವೆ. ಇನ್ನು, ಶೇ. 70ರಷ್ಟು ಕೆರೆಗಳು ಭಾರೀ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿವೆ. ಮತ್ತೆ ಕೆಲವು ಅತಿಕ್ರಮಣಕ್ಕೂ ಒಳಗಾಗಿವೆ. ನಗರ ಪ್ರದೇಶದಲ್ಲಿ ಬಹುತೇಕ ಕೆರೆಗಳು ಕೊಳಚೆ ನೀರಿನಿಂದ ತುಂಬಿ ಕೆರೆಗಳ ಸೌಂದರ್ಯ ಹಾಳಾಗಿದೆ. ಹೀಗಾಗಿ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎಲ್ಲ ರೀತಿಯ ಕೆರೆಗಳ ಸಮೀಕ್ಷೆ ಸಹ ನಡೆಯುತ್ತಿದೆ ಎಂದು ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.

ವರ್ಷಪೂರ್ತಿ ನೀರಿನ ಅನುಕೂಲದ ದೃಷ್ಟಿಕೋನದಿಂದ ಹಿಂದಿನ ತಲೆಮಾರು ಪ್ರತಿಯೊಂದು ಹಳ್ಳಿಯಲ್ಲಿ ನಿರ್ಮಿಸಿರುವ ಕೆರೆ-ಕಟ್ಟೆಗಳು, ಹಳ್ಳಗಳು ಈಗ ಮಳೆಗಾಲದ ತಿಂಗಳುಗಳಲ್ಲಿ ಮಾತ್ರ ತುಂಬಿರುತ್ತಿದ್ದು, ಒಂದು ಅಧ್ಯಯನ ಪ್ರಕಾರ ಶೇ. 87ರಷ್ಟು ಕೆರೆಗಳು ಜುಲೈನಿಂದ ಅಕ್ಟೋಬರ್ ವರೆಗೆ ಕೇವಲ ನಾಲ್ಕು ತಿಂಗಳು ಮಾತ್ರ ನೀರು ಹೊಂದಿರುತ್ತವೆ. ಆನಂತರದ ದಿನಗಳಲ್ಲಿ ಖಾಲಿ ಖಾಲಿಯಾಗಿರುತ್ತವೆ ಎಂಬುದೇ ಬೇಸರದ ಸಂಗತಿ.

ರಕ್ಷಣೆಯಾಗಲಿ ಕೆರೆ-ಕಟ್ಟೆಗಳು..

ಹಳ್ಳಿಗಳ ನರನಾಡಿಗಳಾಗಿ ಕೆರೆಗಳು ಕಾರ್ಯ ಮಾಡುತ್ತವೆ. ಆದರೆ, ಅವುಗಳ ನಿರ್ವಹಣೆ ಮಾತ್ರ ಯಾರೂ ಮಾಡುತ್ತಿಲ್ಲ. ಹೀಗಾಗಿ ಕೆರೆಗಳು ಕಣ್ಮರೆಯಾಗುತ್ತಿವೆ. ಸರ್ಕಾರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಅದು ಹಲ್ಲಿಲದ ಹಾವಾಗಿದೆ. ಈ ಹಿನ್ನೆಲೆಯಲ್ಲಿ ಬರೀ ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿ ಕೆರೆಗಳ ಸಂಖ್ಯೆ ಎಷ್ಟು? ಅವುಗಳ ಸ್ಥಿತಿ-ಗತಿ ಏನಿದೆ? ಅತಿಕ್ರಮಣ ನಿರ್ಬಂಧನೆ ಮಾಡುವುದು, ಅವುಗಳಿಗೆ ಹರಿದು ಬರುವ ನೀರಿನ ಮೂಲಗಳ ರಕ್ಷಣೆ, ನಗರ ಸುತ್ತಲಿನ ಕೆರೆಗಳಿಗೆ ಕೊಳಚೆ ನೀರು ಬರದಂತೆ ನೋಡಿಕೊಳ್ಳುವ ಮೂಲಕ ಕೆರೆ ರಕ್ಷಣೆ ಆಗಬೇಕಿದೆ.

ಡಾ. ರಾಜೇಂದ್ರ ಪೋದ್ದಾರ, ವಾಲ್ಮಿ ಸಂಸ್ಥೆ ಮಾಜಿ ನಿರ್ದೇಶಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ