ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಭರಮಸಾಗರದಲ್ಲಿ ನಡೆದ ವಿಶೇಷ ಸಭೆಯನ್ನು ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
24 ವರ್ಷಗಳ ನಂತರ ದೇಶದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಮಗ್ರವಾದ ವಿಶೇಷ ಕಾರ್ಯ ನಡೆಯುತ್ತಿದೆ. ನಾಗರಿಕರು ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಸಹಕರಿಸಬೇಕು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಭರಮಸಾಗರದ ಡಿ.ವಿ.ಎಸ್. ಕನ್ವೆನ್‍ಷನ್ ಹಾಲ್‍ನಲ್ಲಿ ಭಾರತೀಯ ಜನತಾ ಪಕ್ಷ ಭರಮಸಾಗರ ಮಂಡಲ ವತಿಯಿಂದ ಕರೆಯಲಾಗಿದ್ದ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗ ನಡೆಯುತ್ತಿರುವ ಎಸ್.ಐ.ಆರ್ ಜೀವನದ ಉಸಿರು, ಭಾರತೀಯರ ಗೌರವದ ಪ್ರತೀಕ. ಇದರಿಂದ ಕಳ್ಳ ಓಟು ಹಾಕುತ್ತಿದ್ದವರಿಗೆ ಕಡಿವಾಣ ಬೀಳಲಿದೆ ಎಂದರು.
ಮತಕ್ಕೆ ವಿಶಿಷ್ಟ ಸ್ಥಾನವಿದೆ. ಕೇವಲ ಒಂದೇ ಮತದಿಂದ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಅಂತಹ ಮಹತ್ವದ ಪರಿಷ್ಕರಣೆಯ ಸಂದರ್ಭದಲ್ಲಿ ಎಲ್ಲರೂ ಜಾಗರೂಕತೆಯಿಂದ ಸಹಕರಿಸಿ ಎಂದರು.
ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ಡಿಲಿಟ್ ಮಾಡಿಸುವುದು ಹಾಗೂ ಹೊಸಬರ ಹೆಸರನ್ನು ಸೇರ್ಪಡೆಗೊಳಿಸುವ ಕೆಲಸ ಮಾಡಿ. ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸರ್ಕಾರದ ಯಾವ ಸೌಲಭ್ಯವೂ ಸಿಗುವುದಿಲ್ಲ. ಅದಕ್ಕಾಗಿ ಮತಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಎಂದು ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.
ನಮ್ಮ ತಾಲೂಕಿನಲ್ಲಿ ಒಬ್ಬ ವ್ಯಕ್ತಿಯ ಹೆಸರು 17 ಕಡೆ ಇದೆಯೆಂದರೆ ನಂಬುತ್ತೀರಾ? ರಾಜ್ಯ ಸರ್ಕಾರದಲ್ಲಿ ಸುಲಲಿತವಾಗಿ ಯಾವ ಕೆಲಸವೂ ನಡೆಯುತ್ತಿಲ್ಲ. ಹಣವಿಲ್ಲದಂತ ಪರಿಸ್ಥಿತಿಯಲ್ಲಿ ಕೋಟ್ಯಂತರ ರು. ಅನುದಾನ ಮಂಜೂರು ಮಾಡಿಸಿಕೊಂಡು ಪ್ರತಿನಿತ್ಯವು ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡುತ್ತಿರುತ್ತೇನೆ. 650 ಕೋಟಿ ರು.ಗಳಲ್ಲಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು, ತಾಲೂಕಿನಾದ್ಯಂತ 17 ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ, ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರು. ಖರ್ಚು ಮಾಡಿದ್ದೇನೆ. ನೀರು, ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ, ವಿದ್ಯುತ್‍ಗೆ ಮೊದಲ ಆದ್ಯತೆ ನೀಡಲಾಗುವುದೆಂದರು.
ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕಲ್ಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಉಪಾಧ್ಯಕ್ಷ ಶೈಲೇಶ್‍ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್, ಮಂಜುನಾಥ್, ಡಿ.ಎಸ್.ಪ್ರವೀಣ್‍ಕುಮಾರ್, ಕಲ್ಲೇಶ್, ನಾಗೇಂದ್ರಪ್ಪ, ಕೆ.ಬಿ. ಮೋಹನ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕರಿಯಮ್ಮ, ನವೀನ್, ಶರಣಪ್ಪ, ನಾಗರಾಜ್, ಶಿವಕುಮಾರ್, ಬಸವರಾಜ್, ತಿಪ್ಪೇಶ್, ಭರಮಸಾಗರ ಮಂಡಲದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.