ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ

KannadaprabhaNewsNetwork |  
Published : Oct 10, 2025, 01:02 AM IST
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೈಪಿಡಿಯನ್ನು ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ವಿತರಿಸಲಾಯಿತು. | Kannada Prabha

ಸಾರಾಂಶ

ಭಾರತ ಚುನಾವಣಾ ಆಯೋಗವು ಆರಂಭಿಸಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ವಿವಿಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ಚುನಾವಣಾ ಆಯೋಗವು ಆರಂಭಿಸಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ವಿವಿಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ, ವಿಶೇಷ ಪರಿಷ್ಕರಣೆ ಮತ್ತು ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ನಡೆಸಿ, ಮತದಾರರ ಪಟ್ಟಿಯಲ್ಲಿನ ಅನರ್ಹರ ಹೆಸರುಗಳನ್ನು ತೆಗೆಯುವ ಮತ್ತು ಅರ್ಹ ಮತದಾರರ ಹೆಸರುಗಳನ್ನು ಸೆರ್ಪಡೆ ಮಾಡಲಾಗುತ್ತದೆ. ಅದರಂತೆ ರಾಷ್ಟ್ರೀಯ ಚುನಾವಣಾ ಆಯೋಗವು ಪ್ರಸ್ತುತದಲ್ಲಿರುವ ಮತದಾರರ ಪಟ್ಟಿಯನ್ನು ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಮೂಲಕ ಹೊಸ ಮತದಾರರ ಪಟ್ಟಿ ತಯಾರಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.

ಯಾವುದೇ ವ್ಯಕ್ತಿಯ ಹೆಸರು 2002ರ ಮತದಾರರ ಪಟ್ಟಿಯಲ್ಲಿ ದಾಖಲಾಗಿದ್ದರೆ, ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ಕೊಳ್ಳುವುದಕ್ಕಾಗಿ, ಮತದಾರರಾಗಿ ಅವರ ಅರ್ಹತೆ ಸುಸ್ಥಾಪಿಸುವುದಕ್ಕೆ ನಿಗದಿಪಡಿಸಲಾದ ವ್ಯಾಪಕ ಪ್ರಮಾಣದ ಅರ್ಹ ಸರ್ಕಾರಿ ದಸ್ತಾವೇಜುಗಳ ಪೈಕಿ ಯಾವುದನ್ನಾದರೂ ಸಲ್ಲಿಸಬೇಕಾಗುತ್ತದೆ. ಅಲ್ಲದೇ ಹೊಸ ಮತದಾರನಾಗಿ ಅಥವಾ ಬಿಹಾರ ರಾಜ್ಯದ ಹೊರಗಿನಿಂದ ಸ್ಥಳಾಂತರಗೊಂಡ ಮತದಾರನಾಗಿ ನೋಂದಾಯಿಸಿಕೊಳ್ಳುವ ಅರ್ಜಿಯ ಸಂದರ್ಭದಲ್ಲಿ ಇನ್ನು ಮುಂದೆ ಅರ್ಜಿದಾರನು ನಮೂನೆ 6, ನಮೂನೆ 8 ರೊಂದಿಗೆ ಅದರಲ್ಲಿ ಮಾಡಲಾಗಿರುವ ಘೋಷಣೆಗೆ ಬೆಂಬಲವಾಗಿ ಹೆಚ್ಚುವರಿ ಘೋಷಣಾ ನಮೂನೆ ಅನುಬಂಧ ಡಿ ಅನ್ನು ಸಹ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆಂದೂ ಕೂಡ ನಿರ್ದೇಶಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೈಪಿಡಿಯನ್ನು ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ವಿತರಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ ರಾಜಕೀಯ ಪ್ರತಿನಿಧಿಗಳಾದ ಕಾಂಗ್ರೆಸ್ ಪಕ್ಷದಿಂದ ಶ್ರೀನಿವಾಸ ಬಳ್ಳಾರಿ, ರಾಜು ಮನ್ನಿಕೇರಿ, ಬಿಜೆಪಿ ಪಕ್ಷದಿಂದ ಮಲ್ಲಿಕಾರ್ಜುನ ಕಾಂಬಳೆ, ಬಿಎಸ್‌ಪಿ ಪಕ್ಷದಿಂದ ಯಮನಪ್ಪ ಶಿರೂರ, ಆನಂದ ದೇವಾಡಿಗ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯ ಶಾಸಕಾಂಗ ಮತ್ತು ಸಂಸತ್ತಿಗೆ ನಿಯತಕಾಲಿಕವಾಗಿ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೊಸ ಮತದಾರರ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದಾಗಲೆಲ್ಲ, ಹಿಂದಿನ ಮತದಾರರ ಪಟ್ಟಿಗಳು ನಿಷ್ಕ್ರಿಯವಾಗುತ್ತವೆ ಮತ್ತು ಹೊಸದು ಮಾತ್ರ ಜಾರಿಯಲ್ಲಿರುತ್ತದೆ. ಹಿಂದಿನ ಮತದಾರರ ಪಟ್ಟಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗುತ್ತದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪ್ರತಿ ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಮನೆ-ಮನೆ ಭೇಟಿ ಮೂಲಕ ಮತಗಟ್ಟೆ ಮಟ್ಟದ ಅಧಿಕಾರಿಗಳು ಪರಿಷ್ಕರಿಸಲಿದ್ದು, ವಿವಿಧ ರಾಜಕೀಯ ಪಕ್ಷದವರು ಮತಗಟ್ಟೆ ಮಟ್ಟದಲ್ಲಿ ನೇಮಿಸುವ ಸಿಬ್ಬಂದಿ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ