ಕನ್ನಡಪ್ರಭ ವಾರ್ತೆ ಮೈಸೂರುಕಲಬುರಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ. ಶ್ರೀನಿವಾಸ ಮಣಗಳ್ಳಿ ಅವರು ''''''''ಅರಿವೇ ಅಂಬೇಡ್ಕರ್'''''''' ಕೃತಿಯು ಹಲವಾರು ಆತ್ಮಾವಲೋಕನ ಪ್ರಶ್ನೆಗಳನ್ನು ಎತ್ತಿ, ವಿಮರ್ಶಿಸುವ ಮೂಲಕ ''''''''ಸಂವಿಧಾನ ಶಿಲ್ಪಿ'''''''' ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ.ಶ್ರೀನಿವಾಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ಅವರು ಬೇರೆ ಬೇರೆಯ ಸಂದರ್ಭದಲ್ಲಿ ಬರೆದ 19 ಲೇಖನಗಳು ಇಲ್ಲಿವೆ.ಸಂವಿಧಾನ ದಿನಾಚರಣೆಃ ಭಾರತೀಯರು ಕೇಳಿಕೊಳ್ಳಬೇಕಾದ ಆತ್ಮಾವಲೋಕನ ಪ್ರಶ್ನೆ ಲೇಖನವು ಸಂವಿಧಾನದ ಮಹತ್ವವನ್ನು ತಿಳಿಸುತ್ತದೆ. ಅರಿವೇ ಅಂಬೇಡ್ಕರ್ ಅವರ ಅಧ್ಯಾತ್ಮ, ಕಾರ್ಮಿಕ ವರ್ಗಕ್ಕೆ ಡಾ.ಅಂಬೇಡ್ಕರ್ ಸಂದೇಶ, ಮಾನವ ಹಕ್ಕುಗಳ ರಕ್ಷಕ ಅಂಬೇಡ್ಕರ್ ಲೇಖನಗಳಲ್ಲಿ ಅವರ ಬದುಕು, ಹೋರಾಟ, ಚಿಂತನೆಗಳನ್ನು ದಾಖಲಿಸಿದ್ದಾರೆ.ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ರಾಜಕೀಯ ಅಪರಾಧವೇ?. ಪೂನಾ ಒಪ್ಪಂದ ಪರಾವಲಂಬಿ ದಲಿತ ರಾಜಕಾರಣ, ಭೀಮಾ ಕೋರೆಂಗಾವ್ಃ ಸ್ವಾಭಿಮಾನ ಮತ್ತು ಸಾಮಾಜಿಕ ಬದಲಾವಣೆಯ ಹೋರಾಟ ಲೇಖನಗಳು ಕೂಡ ಆಯಾ ಕಾಲಘಟ್ಟದ ಬಗ್ಗೆ ಅರಿವು, ಪ್ರಸ್ತುತ ಪರಿಸ್ಥಿತಿಯಲ್ಲಿ ಅವುಗಳ ಉಪಯುಕ್ತತೆ ಬಗ್ಗೆ ಅರಿವು ಮೂಡಿಸುತ್ತವೆ. ಅಮೃತ ಕಾಲದ ಆರ್ಥಿಕತೆ ಲೇಖನದಲ್ಲಿ ಪ್ರಸ್ತುತ ದೇಶದ ಆರ್ಥಿಕ ವಿಷಯಗಳ ಬಗ್ಗೆ ವಿಮರ್ಶಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿವೆ ಎಂಬುದನ್ನು ದಾಖಲಿಸಿದ್ದಾರೆ. ಬಹುಜನ ಸಮಾಜ ಪಾರ್ಟಿಯ ನಾಯಕತ್ವ ಬದಲಾವಣೆ ಸಾಧ್ಯವೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ದಲಿತ ರಾಜಕಾರಣಕ್ಕೆ ಹೊಸ ಅಮೂಲಾಗ್ರ ಪರ್ಯಾಯದ ಅಗತ್ಯವಿದೆ ಎಂದಿದ್ದಾರೆ. ಭಾರತದಲ್ಲಿ ವೈಜ್ಞಾನಿಕ ಮನೋಭಾವವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಶೋಷಣೆಯ ವ್ಯವಸ್ಥೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಮೇಲೆ ಸಸ್ಯಹಾರಿ ಏಕ ಸಂಸ್ಕೃತಿಯ ಆಹಾರ ಏರಿಕೆ ಸಾಧುವಲ್ಲ ಎಂದಿದ್ದಾರೆ. ಇಡಬ್ಲ್ಯೂಎಸ್ನಿಂದ ಮೀಸಲಾತಿ ಅಂತ್ಯವಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಬಗ್ಗೆ ಲೇಖನದಲ್ಲಿ ಭಾರತದ ಮನಸ್ಸುಗಳನ್ನು ಜೋಡಿಸಬಹುದೇ? ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಕಳೆದು ಹೋದ ಜೀವಗಳು, ಕಮರಿದ ಕನಸುಗಳುಃ ಶೈಕ್ಷಣಿಕ ಸಮಾನತೆಯ ಸೋಲು ಎಂಬ ಲೇಖನವೂ ಇದೆ. ಮಲಯಾಳಂ ಸಿನಿಮಾ ಜನಗಣಮನ ಕುರಿತು ಬರೆದಿದ್ದಾರೆ. ಸಂವಿಧಾನದ ಮಾತು ಕಲಿಸಿದ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಇದು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು, ಸಾಮಾಜಿಕ ನ್ಯಾಯ, ಸಮಾನತೆ ತಿಳಿಸುವ ಕೃತಿಯಾಗಿದೆ. ಅಲ್ಲದೇ ಓದುಗರನ್ನು ಪ್ರೇರೇಪಿಸುವ, ಚಿಂತನೆಗೆ ಹಚ್ಚುವ ಕೃತಿಯಾಗಿದೆ ಎನ್ನಬಹುದು.ಮೈಸೂರಿನ ತಾರಾ ಪ್ರಿಂಟಿಂಗ್ ಪ್ರೆಸ್ ಅಂಡ್ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದ್ದು, ಪ್ರೊ.ಪುರುಷೋತ್ತಮ ಬಿಳಿಮಲೆ, ಪ್ರೊ.ಬಿ.ಪಿ. ಮಹೇಶಚಂದ್ರ ಗುರು ಅವರ ಆಶಯ ನುಡಿ, ಕವಿ ಸೋಸಲೆ ಗಂಗಾಧರ್ ಅವರ ಬೆನ್ನುಡಿ ಇದೆ. ಅಲ್ಲದೇ ಕಲಬುರಗಿ ಕೇಂದ್ರೀಯ ವಿವಿಯ ಪ್ರಾಧ್ಯಾಪಕರಾದ ಡಾ. ಶಿವಗಂಗಾ ರುಮ್ಮಾ, ಡಾ.ಅಪ್ಪಗೆರೆ ಸೋಮಶೇಖರ್ ಅವರ ಅಭಿಪ್ರಾಯಗಳೂ ಇವೆ. ಆಸಕ್ತರು ಡಾ.ಡಿ. ಶ್ರೀನಿವಾಸ ಮಣಗಳ್ಳಿ, ಮೊ. 99802 90500 ಸಂಪರ್ಕಿಸಬಹುದು.