ಭಟ್ಕಳ: ಮುರ್ಡೇಶ್ವರದ ಜನಾನುರಾಗಿ ವೈದ್ಯ, ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯ, ಯಕ್ಷರಕ್ಷೆಯ ಮೂಲಕ ಯಕ್ಷಗಾನ, ಕಲೆ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿ ಇತ್ತೀಚೆಗೆ ನಿಧನರಾದ ಡಾ. ಐ.ಆರ್. ಭಟ್ ಅವರಿಗೆ ತಾಲೂಕು ಕಸಾಪದಿಂದ ಮುರ್ಡೇಶ್ವರದ ಮಾನಾಸ್ಮೃತಿಯಲ್ಲಿ ನುಡಿನಮನ ಸಲ್ಲಿಸಲಾಯಿತು.
ಜಿಲ್ಲಾ ಕಸಾಪ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಮಾತಿಗೆ ಅನುರೂಪವಾಗಿ ಬದುಕಿ ಯಕ್ಷರಕ್ಷೆಯ ಮೂಲಕ ಕಲೆ ಮತ್ತು ಕಲಾವಿದರನ್ನು ಬೆಳೆಸಿದ್ದನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಐ.ಆರ್. ಭಟ್ ಅವರ ಬದುಕು ನಮ್ಮ ನಂತರ ಜನರು ಹೇಗೆ ನಮ್ಮನ್ನು ಸ್ಮರಿಸಿಕೊಳ್ಳಬೇಕು ಎಂಬುದಕ್ಕೆ ಸಾಕ್ಷಿ ಎಂದರು.ಮಾನಾಸುತ ಶಂಭು ಹೆಗಡೆ ಮಾತನಾಡಿ, ತಮ್ಮ ತಂದೆಯವರಾದ ಮಾಳ್ಕೋಡು ನಾರಾಯಣ ಹೆಗಡೆ ಅವರ ಸಾಹಿತ್ಯಕ ರಚನೆಗಳಿಗೆ, ಅವರ ಕೃತಿ ಬಿಡುಗಡೆಯ ಎಲ್ಲ ಕಾರ್ಯಕ್ರಮಗಳಿಗೆ ಡಾ. ಐ.ಆರ್. ಭಟ್ ಅವರ ಸಹಕಾರ ಸ್ಮರಿಸಿದರು.
ಯಕ್ಷಗಾನದ ಹಾಡಿನ ಮೂಲಕ ಗಣಪತಿ ಕಾಯ್ಕಿಣಿ ಪ್ರಾರ್ಥನೆ ಸಲ್ಲಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ, ಸಾಹಿತಿ ಶ್ರೀಧರ ಶೇಟ್ ನಿರೂಪಿಸಿದರು. ಉದಯ ನಾಯಕ, ಮಾರುತಿ ನಾಯ್ಕ, ಪ್ರಕಾಶ್ ಭಟ್, ಪರಮೇಶ್ವರ್ ಎನ್. ಭಟ್, ಶಂಕರ್ ಭಟ್ರ ಹಿತ್ತಲ ಮುಂತಾದವರು ಉಪಸ್ಥಿತರಿದ್ದರು.