ರಾಘು ಕಾಕರಮಠ
ಟಿಕೆಟ್‌ಗಾಗಿ ಮೊಬೈಲ್‌ನಲ್ಲಿ ಪಾವತಿ ಮಾಡಿದರೆ ಹಣ ಕಡಿತವಾಗುತ್ತದೆ. ಆದರೆ ಟಿಕೆಟ್ ಮಾತ್ರ ಕೈ ಸೇರುವುದಿಲ್ಲ. ಹಣವೂ ಹೋಯಿತು. ಟಿಕೆಟ್ ಕೂಡ ಬರಲಿಲ್ಲ ಎಂಬ ಪರಿಸ್ಥಿತಿ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಸಾರಿಗೆ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇಲ್ಲದೆ, ಕೇವಲ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಷಣಾರ್ಧದಲ್ಲಿ ಟಿಕೆಟ್ ಪಡೆಯುವ ವ್ಯವಸ್ಥೆ ಆರಂಭವಾದಾಗ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಕಳೆದ ಎರಡ್ಮೂರು ತಿಂಗಳಿಂದ ಯುಪಿಐ ಪಾವತಿಯಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಎಚ್ಚೆತ್ತ ಕೆಲವೊಂದು ಡಿಪೋಗಳಲ್ಲಿ ಯುಪಿಐ ಪಾವತಿಯನ್ನು ಅಧಿಕಾರಿಗಳ ಆದೇಶದ ಅನ್ವಯ ರದ್ದುಪಡಿಸಲಾಗಿದೆ. ಮೊಬೈಲ್‌ನಿಂದ ಹಣ ಕಡಿತವಾದರೂ ಟಿಕೆಟ್ ಜನರೇಟ್ ಆಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ಮತ್ತೊಂದೆಡೆ, ಕಡಿತವಾದ ಹಣ ಮರುಪಾವತಿಯಾಗಲು ಎರಡು ದಿನಗಳವರೆಗೆ ಕಾಯಬೇಕಾದ ಸ್ಥಿತಿ ಎದುರಾಗುತ್ತಿದೆ. ಇದರಿಂದ ಕೆಲವೆಡೆ ಪ್ರಯಾಣಿಕರು ನಿರ್ವಾಹಕರೊಂದಿಗೆ ವಾಗ್ವಾದ ನಡೆಸುವ ಪ್ರಸಂಗವೂ ಉಂಟಾಗುತ್ತಿದೆ.ಈ ಮೊದಲು ಕ್ಯು ಆರ್ ಕೋಡ್ ಹೊಂದಿರುವ ಯುಪಿಐ ಟ್ಯಾಗ್‌ಅನ್ನು ನಿರ್ವಾಹಕರಿಗೆ ನೀಡಲಾಗಿತ್ತು. ಅದಕ್ಕೆ ಪ್ರಯಾಣಿಕರು ಸ್ಕ್ಯಾನ್ ಮಾಡುತ್ತಿದ್ದರು. ಆದರೆ ಇಲಾಖೆ ಈ ಟ್ಯಾಗ್‌ಅನ್ನು ರದ್ದು ಪಡಿಸಿ ಟಿಕೇಟ್ ಯಂತ್ರದಲ್ಲಿಯೇ ಜನರೇಟ್ ಆಗುವ ಕ್ಯು ಆರ್ ಕೋಡ್‌ಗೆ ಪಾವತಿ ಮಾಡುವ ವ್ಯವಸ್ಥೆ ತರಲಾಗಿದೆ. ಕೆಲವೊಮ್ಮೆ ಆ್ಯಪ್‌ನ ತಾಂತ್ರಿಕ ಸಮಸ್ಯೆ ಹಾಗೂ ನೆಟವರ್ಕ್ ಸಮಸ್ಯೆಯಿಂದ ಟಿಕೆಟ್ ಬರುತ್ತಿಲ್ಲ. ಟಿಕೆಟ್ ಬರದೇ ಇದ್ದರೆ ಇನ್ನೊಬ್ಬರಿಗೆ ಟಿಕೆಟ್ ಕೊಡಲು ಸಾಧ್ಯವಾಗದ ಅಸಹಾಯಕ ಸ್ಥಿತಿ ನಿರ್ವಾಹಕರದ್ದಾಗಿದೆ.
ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದ್ದ ಯುಪಿಐ: ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಎಲ್ಲರಿಗೂ ಟಿಕೆಟ್ ನೀಡುವುದರ ಜತೆಗೆ, ಪ್ರತಿಯೊಬ್ಬರಿಗೂ ಸರಿಯಾದ ಚಿಲ್ಲರೆ ನೀಡುವುದು ನಿರ್ವಾಹಕರಿಗೆ ಸವಾಲಾಗಿತ್ತು. ಚಿಲ್ಲರೆ ವಿಚಾರದಲ್ಲಿ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಟಿಕೆಟ್ ಪಡೆಯದೆ ತಪ್ಪಿಸಿಕೊಳ್ಳುವ ಯತ್ನ, ಚಿಲ್ಲರೆ ಮರಳಿಸದಿರುವ ಆರೋಪಗಳೂ ಕೇಳಿಬರುತ್ತಿದ್ದವು.ಡಿಜಿಟಲ್ ಪೇಮೆಂಟ್‌ಗೆ ಪ್ರಯಾಣಿಕರ ಒಲವು
ಅಂಕೋಲಾ ಸಾರಿಗೆ ಡಿಪೋದಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಟಿಕೆಟ್ ಹಣ ಸಂಗ್ರಹದಲ್ಲಿ ಅಂದಾಜು ಶೇ. 17ರಷ್ಟು ಮೊತ್ತ ಯುಪಿಐ ಮೂಲಕ ಪಾವತಿಯಾಗುತ್ತಿತ್ತು. ಆದರೆ ಇತ್ತೀಚಿನ ತಾಂತ್ರಿಕ ಸಮಸ್ಯೆಯಿಂದಾಗಿ ಯುಪಿಐ ಪಾವತಿಯ ಪ್ರಮಾಣ ಕುಸಿದಿರುವುದು ಗಮನಾರ್ಹವಾಗಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.
ತಾಂತ್ರಿಕ ಸಮಸ್ಯೆ: ಯುಪಿಐ ಟಿಕೆಟ್‌ಗೆ ತಾಂತ್ರಿಕವಾಗಿ ಸಮಸ್ಯೆಯಾಗಿದೆ. ಈ ಬಗ್ಗೆ ಶಿರಸಿ ವಿಭಾಗೀಯ ಕಚೇರಿಗೆ ವರದಿ ಮಾಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ಬಂದಿದೆ. ತಾಂತ್ರಿಕ ಕಾರಣದಿಂದ ಆಗುತ್ತಿರುವ ಅಡಚಣೆಗೆ ಪ್ರಯಾಣಿಕರು ಸಹ ಇಲಾಖೆಯೊಡನೆ ಸಹಕರಿಸುವಂತಾಗಬೇಕು ಎಂದು ಅಂಕೋಲಾ ಸಾರಿಗೆ ಡಿಪೋದ ಘಟಕ ವ್ಯವಸ್ಥಾಪಕರಾದ ಸಂತೋಷ ವೆರ್ಣೇಕರ ತಿಳಿಸಿದರು.