ಸುಸಜ್ಜಿತ ಕಟ್ಟಡವಿದ್ದರೂ ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಔಷಧಿಗಳ ಕೊರತೆ

KannadaprabhaNewsNetwork |  
Published : Oct 01, 2026, 02:30 AM IST
ಶಿಗ್ಗಾವಿಯ ನೂತನ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಕಟ್ಟಡದ ಹೊರನೋಟ | Kannada Prabha

ಸಾರಾಂಶ

ಪಟ್ಟಣದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದ್ದರೂ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಮತ್ತು ಔಷಧಿಗಳ ಅಲಭ್ಯತೆಯಿಂದಾಗಿ ಚಿಕಿತ್ಸೆಗೆ ಆಗಮಿಸುವ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಚಿಕಿತ್ಸೆಗೆ ಆಗಮಿಸಿ ನಿತ್ಯ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು

ಬಸವರಾಜ ಹಡಪದ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಪಟ್ಟಣದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದ್ದರೂ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಮತ್ತು ಔಷಧಿಗಳ ಅಲಭ್ಯತೆಯಿಂದಾಗಿ ಚಿಕಿತ್ಸೆಗೆ ಆಗಮಿಸುವ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಶಿಗ್ಗಾಂವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡ ಮತ್ತು ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಸಂಖ್ಯೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದಿರುವುದು ರೋಗಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ದೂರದ ಗ್ರಾಮಗಳಿಂದ ಚಿಕಿತ್ಸೆಗಾಗಿ ಬರುವ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.ಔಷಧಿಗಾಗಿ ಖಾಸಗಿ ಅಂಗಡಿಗಳತ್ತ ರೋಗಿಗಳು:

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯಬೇಕಾದ ಕೆಲವು ಔಷಧಿಗಳು ಲಭ್ಯವಿಲ್ಲದ ಸಂದರ್ಭದಲ್ಲಿ, ರೋಗಿಗಳಿಗೆ ಹೊರಗಿನ ಖಾಸಗಿ ಔಷಧ ಅಂಗಡಿಗಳಿಂದ ಔಷಧಿ ಖರೀದಿಸುವಂತೆ ಸೂಚಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ, ಬಡ ಕುಟುಂಬಗಳಿಗೆ ಇದು ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ಜನರಿಗೆ ಅಗತ್ಯ ಔಷಧಿಗಳು ಆಸ್ಪತ್ರೆಯಲ್ಲೇ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು. ಔಷಧಿ ಕೊರತೆಗೆ ಕಾರಣವೇನು ಎಂಬುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸೇವೆಗೆ ಹೊಡೆತ:

ವೈದ್ಯರ ಜೊತೆಗೆ ನರ್ಸಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಇತರೆ ಅಗತ್ಯ ಸಿಬ್ಬಂದಿಯ ಕೊರತೆಯೂ ಆಸ್ಪತ್ರೆಯ ದೈನಂದಿನ ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಇರುವ ಸಿಬ್ಬಂದಿಯ ಮೇಲೆಯೇ ಹೆಚ್ಚಿನ ಕೆಲಸದ ಒತ್ತಡ ಬೀಳುತ್ತಿರುವುದರಿಂದ ರೋಗಿಗಳಿಗೆ ತ್ವರಿತವಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಕಟ್ಟಡವಿದೆ, ಆದರೆ ಸೇವೆ ಸಮರ್ಪಕವಾಗಿಲ್ಲ:

ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳಿದ್ದರೂ, ಅಗತ್ಯ ವೈದ್ಯರು, ಸಿಬ್ಬಂದಿ ಮತ್ತು ಔಷಧಿಗಳ ಕೊರತೆಯಿಂದ ಅದರ ಪೂರ್ಣ ಪ್ರಯೋಜನ ಜನರಿಗೆ ಸಿಗುತ್ತಿಲ್ಲ. ಕಟ್ಟಡಕ್ಕಿಂತ ಮುಖ್ಯವಾಗಿ ಆಸ್ಪತ್ರೆಯಲ್ಲಿ ನಿರಂತರ ವೈದ್ಯಕೀಯ ಸೇವೆ, ಅಗತ್ಯ ಔಷಧಿ ಹಾಗೂ ಸಮರ್ಪಕ ಸಿಬ್ಬಂದಿ ಇರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಲಿ:

ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ತಕ್ಷಣ ನೀಗಿಸಬೇಕು. ಅಗತ್ಯ ಔಷಧಿಗಳ ನಿರಂತರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರೋಗಿಗಳನ್ನು ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಆರೋಪಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಆಸ್ಪತ್ರೆಯ ಕಾರ್ಯನಿರ್ವಹಣೆಯನ್ನು ಮೇಲಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಹಿಂದೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಸಾರ್ವಜನಿಕರೊಂದಿಗೆ ಉತ್ತಮವಾಗಿ ಸ್ಪಂದಿಸಿ, ಅಗತ್ಯ ಚಿಕಿತ್ಸೆ ನೀಡುತ್ತಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆಯಲ್ಲಿ ಹಿಂದಿನ ಮಟ್ಟದ ಸ್ಪಂದನೆ ಕಾಣುತ್ತಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ಸುಸಜ್ಜಿತ ಕಟ್ಟಡವಿದ್ದರೆ ಸಾಲದು ಅದರೊಳಗೆ ಸಮರ್ಪಕ ವೈದ್ಯರು, ಸಿಬ್ಬಂದಿ, ಔಷಧಿ ಮತ್ತು ಜನಪರ ಸೇವೆ ದೊರೆತಾಗ ಮಾತ್ರ ಸರ್ಕಾರಿ ಆಸ್ಪತ್ರೆಯ ಉದ್ದೇಶ ಸಾರ್ಥಕವಾಗಲಿದೆ. ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳಿಗೆ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.ನಮ್ಮ ಸರ್ಕಾರಿ ವೈದ್ಯರು ಖಾಸಗಿ ಔಷಧ ಅಂಗಡಿಗಳಿಗೆ ಔಷಧ ಬರೆದುಕೊಡುವ ವಿಚಾರ ನನ್ನ ಗಮನಕ್ಕೆ ಇಲ್ಲ, ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರು ಇಲ್ಲ, ಓರ್ವ ಮಕ್ಕಳ ತಜ್ಞರು ಶಿಗ್ಗಾಂವಿಯಲ್ಲಿ ಮೂರು ದಿನ ಹಾಗೂ ಸವಣೂರು ಆಸ್ಪತ್ರೆಯಲ್ಲಿ ಮೂರು ದಿನ ಕಾರ್ಯ ನಿರ್ವಹಿಸುತ್ತಿದ್ದಾರೆ, ಕ್ಯಾಂಟಿನ್ ಹಾಗೂ ನೀರಿನ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆಡ ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಒತ್ತಾಯ
ಡಾ. ಐ.ಆರ್. ಭಟ್ಟರ ಮಾನವೀಯ ಗುಣ ಸ್ಮರಿಸಿದ ಒಡನಾಡಿಗಳು