. ಹೊಸದಾಗಿ ಸಿಇಟಿ ಪರೀಕ್ಷೆ ನಡೆಸುವಂತೆ ಜಿಲ್ಲಾ ಖಾಸಗಿ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಎಸ್.ಜೆ.ಶ್ರೀಧರ್ ಒತ್ತಾಯಿಸಿದ್ದಾರೆ.
ದಾವಣಗೆರೆ : ಸಿಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ 4 ವಿಷಯಕ್ಕೆ ಸಂಬಂಧಿಸಿದಂತೆ 53 ಹೊರಪಠ್ಯದ ಪ್ರಶ್ನೆ ನೀಡಿದ್ದು, ಇದರಿಂದ ಸಿಇಟಿ ಪರೀಕ್ಷೆ ಬರೆದ 3.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಹೊಸದಾಗಿ ಸಿಇಟಿ ಪರೀಕ್ಷೆ ನಡೆಸುವಂತೆ ಜಿಲ್ಲಾ ಖಾಸಗಿ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಎಸ್.ಜೆ.ಶ್ರೀಧರ್ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ಏ.18 ಮತ್ತು 19ರಂದು ಎಂಜಿನಿಯರಿಂಗ್ ಅಥವಾ ಮತ್ತಿತರೆ ಕೋರ್ಸ್‌ಗಳಿಗೆ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಆದರೆ, ಸಿಇಟಿಯಲ್ಲಿ ಔಟ್ ಆಫ್ ಸಿಲಬಸ್‌ನ 53 ಪ್ರಶ್ನೆಗಳನ್ನು ನೀಡಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಇದರಿಂದ ವಿದ್ಯಾರ್ಥಿಗಳು, ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಸಿಇಟಿಗೆ ಮರುಪರೀಕ್ಷೆ ನಡೆಸಲಿ ಎಂದರು.
ಭೌತಶಾಸ್ತ್ರ ವಿಷಯದಲ್ಲಿ 8 ಪ್ರಶ್ನೆ, ರಸಾಯನಶಾಸ್ತ್ರದಲ್ಲಿ 18, ಗಣಿತ ಶಾಸ್ತ್ರದಲ್ಲಿ 15, ಜೀವಶಾಸ್ತ್ರದಲ್ಲಿ 12 ಹೊರ ಪಠ್ಯದ ವಿಷಯಗಳ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ 3.5 ಲಕ್ಷ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ. ಎಂಜಿನಿಯರಿಂಗ್ ಮತ್ತಿತರೆ ಕೋರ್ಸ್‌ಗೆ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದರಿಂದ ಕೊಡಲಿಯೇಟು ಬಿದ್ದಂತಾಗಿದೆ. ಹೊಸದಾಗಿ ಸಿಇಟಿ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
240 ಅಂಕಗಳಲ್ಲಿ 53 ಪಠ್ಯಗಳಲ್ಲಿ ಇಲ್ಲದಂತಹ ಪ್ರಶ್ನೆಗಳು ಬಂದಿವೆ. ಸಿಇಟಿ ಪರೀಕ್ಷೆ ಬೇಜವಾಬ್ದಾರಿ, ಪ್ರಮಾದಕ್ಕೆ ಯಾರೇ ಕಾರಣರಾಗಿದ್ದರೂ ತಕ್ಷಣವೇ ತನಿಖೆಗೊಳಪಡಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಿಇಟಿ ಪರೀಕ್ಷೆ ನಡೆಸಲು ಆಗುವ ಖರ್ಚನ್ನು ಅದೇ ತಪ್ಪಿತಸ್ಥರಿಂದ ವಸೂಲು ಮಾಡಬೇಕು. ಸಿಇಟಿ ಮರುಪರೀಕ್ಷೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಒಂದುವೇಳೆ ವಿಳಂಬ ಧೋರಣೆ ಅನುಸರಿಸಿದರೆ ಸಂಘದಿಂದ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ ಅವರು, ಇಂತಹ ಘನಘೋರ ಸಮಸ್ಯೆಯನ್ನು ಮರುಪರೀಕ್ಷೆಯಿಂದ ಮಾತ್ರ ಬಗೆಹರಿಸಲು ಸಾಧ್ಯ ಎಂದರು.
ರುಪ್ಸಾ ಅಧ್ಯಕ್ಷ ಲೋಕೇಶ ತಾಳಿಕಟ್ಟೆ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಡಿ.ಎಸ್. ಜಯಂತ್, ವೀರೇಶ ಪಟೇಲ್, ಉಮಾಪತಯ್ಯ, ರಾಮಮೂರ್ತಿ, ವಿನಯ್, ಕೆ.ಎಂ.ಮಂಜಪ್ಪ ಇತರರು ಇದ್ದರು.