ಹುಬ್ಬಳ್ಳಿ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ₹ 8 ಲಕ್ಷ ಬಿಡುಗಡೆಯಾಗಿದ್ದರೂ ಅನುದಾನ ಬಿಡುಗಡೆ ಮಾಡಲು ಆಯುಕ್ತರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಅಹೋರಾತ್ರಿ ಧರಣಿ ಆರಂಭಿಸಿದ್ದವು.
ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತ ಡಾ. ರುದ್ರೇಶ್ ಘಾಳಿ ಅವರು, ಕಾಮಗಾರಿ ತಕ್ಷಣ ಆರಂಭಿಸುವುದಾಗಿ ಮೌಖಿಕ ಭರವಸೆ ನೀಡಿದರು. ಆದರೆ, ಪ್ರತಿಭಟನಾಕಾರರು ಕೇವಲ ಮೌಖಿಕ ಭರವಸೆಗೆ ಒಪ್ಪದೆ, ಲಿಖಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು. ಪ್ರತಿಭಟನಾಕಾರರ ಆಗ್ರಹಕ್ಕೆ ಸ್ಪಂದಿಸಿದ ಆಯುಕ್ತರು ಸ್ಥಳದಲ್ಲೇ ಲಿಖಿತ ಭರವಸೆ ನೀಡಿದರು. ಕಾಮಗಾರಿಯ ಗುತ್ತಿಗೆದಾರರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ, ಪಾಲಿಕೆ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಆಯುಕ್ತರ ಭರವಸೆಯಿಂದಾಗಿ ಹೋರಾಟಕ್ಕೆ ಮಹತ್ವದ ಜಯ ಸಿಕ್ಕಂತಾಗಿದೆ ಎಂದು ಸಿದ್ಧಾರ್ಥ ಸೇವಾ ಸಂಘದ ಅಧ್ಯಕ್ಷ ವಿರುಪಾಕ್ಷಿ ಚಲವಾದಿ ಹೇಳಿದ್ದಾರೆ.ಸುರೇಶ ಖಾನಾಪುರ, ಕಂಚಪ್ಪ ಮಲ್ಲಮ್ಮನವರ, ಆನಂದ ಪೂಜಾರಿ, ಬಸಂತಕುಮಾರ ಅನಂತಪುರ, ಗುರುನಾಥ್ ಕ್ವಾಟಿ, ಕೋಟೇಶ ಬುಳ್ಳಾಪೂರ, ರುದ್ರವ್ವ ಚಲವಾದಿ ಮತ್ತಿತರರಿದ್ದರು. ಧರಣಿಗೆ ಬೆಂಬಲ ಸೂಚಿಸಿ ಬಿಜೆಪಿ ಮುಖಂಡರಾದ ಮಹೇಂದ್ರ ಕೌತಾಳ, ನಾರಾಯಣ ಜರತಾರಘರ, ವೆಂಕಟೇಶ ಕಾಟವೆ, ಪ್ರಭು ನವಲಗುಂದಮಠ, ಮಂಜುನಾಥ ಕೊಂಡಪಲ್ಲಿ, ಅಶೋಕ ವಾಲ್ಮೀಕಿ, ಜಗದೀಶ ಬುಳ್ಳನ್ನವರ, ಸಂತೋಷ ಅರಕೇರಿ, ಧರಣಿಯಲ್ಲಿ ಪಾಲ್ಗೊಂಡಿದ್ದರು.