ಕುಷ್ಟಗಿ: ಸಂದೀಪ್ ನಗರದ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಎರಡು ತಿಂಗಳೊಳಗೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವುದಾಗಿ ತಹಸೀಲ್ದಾರ್ ಅಶೋಕ ಶಿಗ್ಗಾವಿ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಭರವಸೆ ನೀಡಿದರು.
ಪುರಸಭೆ ಕಚೇರಿ ಎದುರು ಪ್ರತಿಭಟನಾ ವೇದಿಕೆ ನಿರ್ಮಿಸಿ ಸಂಜೆ 6 ಗಂಟೆ ವರೆಗೆ ಸಾವಿರಾರು ಜನರು ಹಾಗೂ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಧರಣಿ ನಡೆಸಿ, ಸಂದೀಪ್ ನಗರದ ನಿವಾಸಿಗಳಿಗೆ ತಕ್ಷಣ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಮಾತನಾಡಿ, ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಎರಡು ತಿಂಗಳೊಳಗೆ ವರದಿ ಸಿದ್ಧಪಡಿಸಿ, ಪುರಸಭೆ ಮೂಲಕ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ನೀಡಲಾಗುವುದು. ಈಗಾಗಲೇ ಪುರಸಭೆ ವತಿಯಿಂದ ಜಮೀನು ಖರೀದಿಸಲಾಗಿದ್ದು, ಮುಂದಿನ ಹಂತದಲ್ಲಿ ನಿವೇಶನವಿಲ್ಲದವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಯಾರ ಮನೆಯನ್ನೂ ತೆರವುಗೊಳಿಸುವುದಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಕರವೇ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ನಿಂಗರಾಜ ಗೌಡ್ರು ಮಾತನಾಡಿ, ಸುಮಾರು 20 ವರ್ಷಗಳಿಂದ ಬಡವರ ಹಕ್ಕಿಗಾಗಿ ಹೋರಾಟ ನಡೆಸಲಾಗುತ್ತಿದೆ. ಇಂದಿನ ಹೋರಾಟದಿಂದ ಸಂದೀಪ್ ನಗರದ ನಿವಾಸಿಗಳಿಗೆ ನ್ಯಾಯ ದೊರೆಯುವ ಹಂತಕ್ಕೆ ಬಂದಿದೆ. ಅಧಿಕಾರಿಗಳ ಭರವಸೆಯಂತೆ ಎರಡು ತಿಂಗಳೊಳಗೆ ಹಕ್ಕುಪತ್ರ ವಿತರಿಸದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಪುರಸಭೆ ಕಚೇರಿಗೆ ಬೀಗ ಹಾಕಿ ಕುಷ್ಟಗಿ ಪಟ್ಟಣ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.