ಗೋಕರ್ಣ: ಖಗೋಳವೆಂಬ ಕನ್ನಡಿಯಿಂದ ನಮ್ಮ ಬದುಕಿನ ಅಂತರಂಗ ಹಾಗೂ ಬಹಿರಂಗವನ್ನು ನೋಡಿಕೊಳ್ಳಲು ಅವಕಾಶವಿದೆ. ಇದನ್ನು ನಮ್ಮ ಪೂರ್ವಜರು ಸಹಸ್ರ ಸಹಸ್ರ ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ವಿಶಾಲ ಆಕಾಶದಲ್ಲಿ ನಮ್ಮ ಬದುಕು ಎಲ್ಲಿದೆ ಎಂದು ತಿಳಿದುಕೊಳ್ಳಲು ಅವಕಾಶವಿದೆ. ಜಾತಕದಲ್ಲಿ ''''ಲಗ್ನ''''ವನ್ನು ಚೆನ್ನಾಗಿ ಅರ್ಥೈಸಿಕೊಂಡರೆ ಇಡೀ ಬದುಕನ್ನು ತಿಳಿದುಕೊಳ್ಳಬಹುದು. ಆಕಾಶ ಮತ್ತು ಭೂಮಿ ಸಂಧಿಸುವ ತಾಣವೇ ಲಗ್ನ. ಒಂದಕ್ಕೊಂದು ತಾಗುವುದನ್ನು, ಸೇರುವುದನ್ನು ಅದು ಬಿಂಬಿಸುತ್ತದೆ. ಭೂಮಿಯ ಸುತ್ತ ಇರುವ ಆಕಾಶವನ್ನು ಸರಿಯಾಗಿ ಹನ್ನೆರಡು ಪಾಲು ಮಾಡಿದರೆ ಒಂದೊಂದೂ ರಾಶಿ ಎನಿಸಿಕೊಳ್ಳುತ್ತದೆ ಎಂದು ಬಣ್ಣಿಸಿದರು.
ನಾವು ಹುಟ್ಟುವ ಸಮಯದಲ್ಲಿ ಪೂರ್ವದ ತುದಿಯಲ್ಲಿ ಆಕಾಶದ ಯಾವ ಭಾಗ ಸೇರುತ್ತದೆಯೋ ಅದು ನಿಮ್ಮ ಲಗ್ನ ಎನಿಸಿಕೊಳ್ಳುತ್ತದೆ. ಆ ರಾಶಿಯ ಅಧಿಪತಿ ಆಯಾ ವ್ಯಕ್ತಿಯ ಬದುಕನ್ನು ಬಿಂಬಿಸುತ್ತದೆ. ಹೀಗೆ ನಮ್ಮ ಬದುಕಿನ ಪ್ರತಿಬಿಂಬವನ್ನು ನೋಡಿಕೊಳ್ಳಬೇಕು ಎಂದರೆ, ಜನ್ಮದಿನಾಂಕ, ಸ್ಥಳ ಮತ್ತು ಸಮಯವನ್ನು ನಿಖರವಾಗಿ ತಿಳಿದಿರಬೇಕು. ಆ ರಾಶಿಯ ಗ್ರಹ ಆ ಜಾತಕದ ವ್ಯಕ್ತಿಯೇ ಆಗಿರುತ್ತಾನೆ. ದ್ವಾದಶ ರಾಶಿಗಳಂತೆ ದ್ವಾದಶ ಭಾವಗಳೂ ಇರುತ್ತವೆ. ಲಗ್ನ ಒಂದನೇ ಭಾವವಾದರೆ, ಮುಂದಿನ ರಾಶಿಗಳು ಕ್ರಮವಾಗಿ 2ರಿಂದ ಹನ್ನೆರಡನೇ ರಾಶಿಯನ್ನು ಬಿಂಬಿಸುತ್ತವೆ. ದೇಹ- ಆರೋಗ್ಯವನ್ನು ಲಗ್ನ ಅಥವಾ ಮೊದಲ ಭಾವ ಬಿಂಬಿಸುತ್ತದೆ. ಮಾತು- ವಿದ್ಯೆ- ಕುಟುಂಬ- ಧನವನ್ನು ಎರಡನೇ ಭಾವ, ಧೈರ್ಯ, ದುರ್ಬುದ್ಧಿ, ಸಹೋದರರನ್ನು ಮೂರನೇ ಭಾವ ಸೂಚಿಸುತ್ತದೆ. ಚತುರ್ಥಭಾವ ಮುಖ್ಯವಾಗಿ ತಾಯಿ, ಸೋದರಮಾವ, ಜಾಗ, ಸುಖ, ವಾಹನ, ಪಶು, ಸ್ನೇಹಿತನನ್ನು ಸೂಚಿಸುತ್ತದೆ ಎಂದು ವಿವರಿಸಿದರು.ಪ್ರಜ್ಞೆ, ಬುದ್ಧಿ, ವಿವೇಕಶಕ್ತಿ, ಮೇಧಶಕ್ತಿ, ವಿವೇಚನೆ, ಸಲಹೆಗಾರರು, ಮಕ್ಕಳು, ಹಳೆ ಜನ್ಮದ ಪುಣ್ಯವನ್ನು ಪಂಚಮ ಭಾವ ಸೂಚಿಸುತ್ತದೆ. ಷಷ್ಠಭಾವವು ಕಳ್ಳ, ಶತ್ರು, ರೋಗ, ವಿಘ್ನ, ಘಾಸಿಯನ್ನು ಬಿಂಬಿಸುತ್ತದೆ. ವಿವಾಹ, ಪತ್ನಿ, ಸ್ತ್ರೀ, ಯುದ್ಧ, ಬಾಂಧವ್ಯ, ಬೇರ್ಪಡಿಕೆ, ಏಳನೇ ಭಾವದಿಂದ ತಿಳಿಯುತ್ತದೆ. ಎಂಟನೇ ಭಾವದಿಂದ ಮರಣ, ವಿಘ್ನ, ನಾಶ, ವಿಪತ್ತು, ಅಪವಾದ, ಮಠ, ಕೆಲ ಕಾಯಿಲೆಗಳು ಮತ್ತಿತರ ಅಂಶಗಳನ್ನು ತಿಳಿದುಕೊಳ್ಳಬಹುದು. ಭಾಗ್ಯ, ಧರ್ಮ, ದಯೆ, ಪುಣ್ಯ, ತಪಸ್ಸು, ತಂದೆ, ದಾನ, ಉಪಾಸನೆ, ಅನುಷ್ಠಾನ, ಸೌಶೀಲ್ಯಗಳು ಒಂಬತ್ತನೇ ಭಾವದಿಂದ ತಿಳಿಯುತ್ತದೆ. 9ನೇ ಮನೆಯ ಅಧಿಪತಿ ಯಾವ ಮನೆಯಲ್ಲಿರುತ್ತಾನೋ ಅದರಿಂದ ನಮ್ಮ ಹಿಂದಿನ ಜನ್ಮವನ್ನು ತಿಳಿದುಕೊಳ್ಳಬಹುದು ಎಂದರು.
ಗೋವಿಶ್ವ ಮತ್ತು ಗೋಸೇವಾ ಆ್ಯಪನ್ನು ಹಿರಿಯ ಲೆಕ್ಕಪರಿಶೋಧಕ ಮತ್ತು ಗೋಸೇವಕ ರಾಮಕೃಷ್ಣ ಕಲ್ಲಬ್ಬೆ ಬಿಡುಗಡೆ ಮಾಡಿದರು. ಗೋವು ವಿಶ್ವದ ತಾಯಿ. ಗಾವೋ ವಿಶ್ವಸ್ಯ ಮಾತರಃ ಎಂಬ ಭಾವವನ್ನು ಇರಿಸಿಕೊಂಡು ಗೋವಿಶ್ವದ ಪರಿಕಲ್ಪನೆ ರೂಪಿಸಲಾಗಿದೆ. ವಿಶ್ವವಿದ್ಯಾಪೀಠದ ಮಧ್ಯೆ ಇರುವ ಗೋಸನ್ನಿಧಿಯ ಕಾರಣದಿಂದ ಗೋವಿಶ್ವ ಎಂದು ಹೆಸರಿಸಲಾಗಿದೆ. ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಶುದ್ಧ ದೇಸಿ ಹಾಲು ಸಿಗಬೇಕು ಎಂಬ ಕಾರಣಕ್ಕೆ ಗೋವಿಶ್ವ ಅಭಿವೃದ್ಧಿಪಡಿಸಲಾಗಿದೆ ಎಂದು ಇಂದು ಅನಾವರಣಗೊಂಡ ಗೋವಿಶ್ವದ ಬಗ್ಗೆ ವಿವರಿಸಿದರು.