ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಬೆಳಗಿನ ಜಾವ 4ರ ವೇಳೆಗೆ ಗ್ರಾಮದ ಸಮೀಪವೇ ಹರಿಯುವ ಹೆಬ್ಬಳ್ಳ ನದಿಗೆ ಸತ್ತಿಗೆ ಸೂರಪಾನಿ, ಮಂಗಳವಾದ್ಯದೊಡನೆ ಹೊಸತೊರವಳ್ಳಿ ಗ್ರಾಮದ ಮಾರ್ಗವಾಗಿ ಮಕ್ಕಳು ಮತ್ತು ಮಹಿಳೆಯರು, ಗ್ರಾಮಸ್ಥರು ತೆರಳಿ ಕಳಸಗಳನ್ನು ತಂದು ಬೆಳಗನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
3 ಕಿ.ಮೀ. ಗೂ ಹೆಚ್ಚು ದೂರ ಸಾಗಿದ ಮೆರವಣಿಗೆಯಲ್ಲಿ ಬಾಲಕಿಯರು ಕಳಸಗಳನ್ನು ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಮಂಗಳ ವಾದ್ಯದ ಮೇಳಕ್ಕೆ ತಕ್ಕಂತೆ ವೀರಭದ್ರ ಕುಣಿತದವರು ಹೆಜ್ಜೆ ಹಾಕಿದರು. ಮಹಿಳೆಯರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು, ಯುವಕರು ಹೋಳಿಯಾಡಿದರು.ಬೆಳಗ್ಗೆ ಮೆರವಣಿಗೆ ಮುಗಿಯಿತು, ಕಾಳಮ್ಮ ದೇವಿಯ ರಥೋತ್ಸವದ ನಂತರ ತಂಪಿನ ಪೂಜೆ ನಡೆಯಿತು.
ಮಹಿಳೆಯರು ಅಕ್ಕಿ ತಂಬಿಟ್ಟು, ಎಳ್ಳು ತಂಬಿಟ್ಟು, ಗಣಗಲೆ ಹೂವಿನಿಂದ ಮಾಡಿದ ಹಾರ ತಂದು ವಿಶೇಷವಾಗಿ ಪೂಜೆ ಸಲ್ಲಿಸಿದರು. ನಂತರ ಕಾಳಮ್ಮನವರ ರಥದ ಬಳಿ ಪೂಜೆ ಸಲ್ಲಿಸಿ, ಆ ಬಳಿಕ ತಂಬಿಟ್ಟನ್ನು ನೆರೆಯೊರೆಯವರಿಗೆ ಹಂಚಿ ಸಂಭ್ರಮಿಸಿದರು.
ವಿಶೇಷ ಎಡೆ - ರಥೋತ್ಸವದ ಅಂಗವಾಗಿ ಕಾಳಮ್ಮ ದೇವಿಗೆ ಹಲಸಿನ ಹಣ್ಣು ಹಾಗೂ ಬಾಳೆ ಹಣ್ಣಿನ ಎಡೆಯನ್ನು ನೀಡಲಾಯಿತು. ಗ್ರಾಮಸ್ಥರು ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.