ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಕೆಲವು ಅಹಿತಕರ ಘಟನೆಗಳಿಗೆ ಮಾದಕ ವಸ್ತುಗಳು ಕಾರಣ. ಹಾಗಾಗಿ ಒಂದು ಡ್ರಗ್ಸ್ ಪ್ರಕರಣ ನಡೆದರೆ ಕನಿಷ್ಠ 10 ಮಂದಿಯನ್ನಾದರೂ ಬಂಧಿಸಿ ಎಂದು ಪೊಲೀಸ್ ಇಲಾಖೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ನಿರ್ದೇಶನ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣಗಳ ಹಿಂದೆ ಒಳಸಂಚು ನಡೆದಿರುತ್ತದೆ. ಹೆಚ್ಚಿನ ಆರೋಪಿಗಳ ಮನೆಯವರಿಗೂ ಇದು ಗೊತ್ತಿರುತ್ತದೆ, ಅವರಲ್ಲಿ ಕೆಲವರು ಪ್ರಕರಣದಿಂದ ತಲೆಮರೆಸಿಕೊಳ್ಳುತ್ತಾರೆ. ಇಂಥ ಒಳಸಂಚುಗಳನ್ನೂ ಪತ್ತೆ ಹಚ್ಚಬೇಕು. ಒಂದು ಪ್ರಕರಣ ಆದರೆ ಕನಿಷ್ಠ ೧೦ ಜನರನ್ನು ಅರೆಸ್ಟ್ ಮಾಡಿ ನಾಲ್ಕೈದು ಪ್ರಕರಣ ದಾಖಲಿಸಿ, ಹೀಗೆ ಮಾಡಿದರೆ ಆರೋಪಿಗಳಲ್ಲಿ ಭಯ ಮೂಡುತ್ತದೆ ಎಂದು ಅಜೀಮ್ ಸಲಹೆ ನೀಡಿದರು.ದ.ಕ. ಜಿಲ್ಲೆಯ ಡ್ರಗ್ಸ್ ಪ್ರಕರಣಗಳಲ್ಲಿ ಶೇ.95ರಷ್ಟು ಆರೋಪಿಗಳು ಮುಸ್ಲಿಂ ಸಮುದಾಯದವರೇ ಆಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಅಬ್ದುಲ್ ಅಜೀಮ್, ಪ್ರತಿಯೊಂದು ಪ್ರಕರಣಗಳ ಸಂಪೂರ್ಣ ತನಿಖೆ ನಡೆಸಿ ಎಲ್ಲ ಒಳಸಂಚುದಾರರನ್ನು ಬಂಧಿಸಿದರೆ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ. ಅಲ್ಲದೆ ಆರೋಪಿಗಳಿಗೆ ಬೇಲ್‌ಗೆ ಸೆಕ್ಯೂರಿಟಿ ನೀಡುವವರನ್ನೂ ಪೊಲೀಸ್ ಪರಿಶೀಲನೆಗೆ ಒಳಪಡಿಸಬೇಕು ಎಂದರು.
ಮೊಹಲ್ಲಾ ಮಟ್ಟದಲ್ಲಿ ಸಭೆ: ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷರು, ದೇಶದಲ್ಲಿ ಸ್ವಾತಂತ್ರ್ಯಾನಂತರ 47 ಸಾವಿರ ಕೋಮು ಸಂಬಂಧಿ ಅಹಿತಕರ ಘಟನೆಗಳು ನಡೆದಿವೆ. ಕರಾವಳಿಯಲ್ಲಿ ಧಾರ್ಮಿಕ ಭಾವನಾತ್ಮಕತೆಯಿಂದ ಸಣ್ಣ ಘಟನೆಗಳೂ ಕೋಮು ಗಲಭೆಗೆ ಕಾರಣವಾಗುತ್ತಿವೆ. ಇಂಥ ಪ್ರಕರಣಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ. ಅದಕ್ಕಾಗಿ ಕೋಮು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಪೊಲೀಸ್ ಠಾಣೆ ಮಟ್ಟದಲ್ಲಿ ಮಾತ್ರವಲ್ಲ, ಮೊಹಲ್ಲಾಗಳಲ್ಲಿ ಕೂಡ ಶಾಂತಿ ಸಭೆಗಳನ್ನು ನಡೆಸಬೇಕು. ಅಂತಹ ಪೊಲೀಸ್ ಠಾಣೆಗಳಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕು. ಕೋಮು ಪ್ರಕರಣಗಳು ನಿಯಂತ್ರಕ್ಕೆ ಬಂದರೆ ಇಡೀ ರಾಜ್ಯಕ್ಕೆ ದ.ಕ. ಮಾಡೆಲ್ ಜಿಲ್ಲೆ ಆಗಲಿದೆ ಎಂದು ಹೇಳಿದರು.ಮಂಗಳೂರಲ್ಲಿ ವಕ್ಫ್ ಕಚೇರಿ:ವಕ್ಫ್‌ಗೆ ಸಂಬಂಧಿಸಿ ರಾಜ್ಯದಲ್ಲಿ 5 ಪ್ರದೇಶಿಕ ಕಚೇರಿಗಳನ್ನು ಸ್ಥಾಪಿಸಲು ಈ ಹಿಂದೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ನಾಲ್ಕು ಕಚೇರಿಗಳು ಆಗಿವೆ. ಈ ವರ್ಷ ಕರಾವಳಿಯ ದ.ಕ., ಉಡುಪಿ, ಉ.ಕ. ಜಿಲ್ಲೆಗಳಿಗೆ ಸಂಬಂಧಿಸಿ ಮಂಗಳೂರಿನಲ್ಲಿ ರೀಜನಲ್ ಕಚೇರಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಇದು ಕಾರ್ಯರೂಪಕ್ಕೆ ಬಂದರೆ ಕರಾವಳಿಯ ಜನರು ಮೈಸೂರು, ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಬಹುದು ಎಂದು ಅಬ್ದುಲ್ ಅಜೀಮ್ ತಿಳಿಸಿದರು.ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್:ವಕ್ಫ್ ಆಸ್ತಿ ಉಳಿಸಲು ಟಾಸ್ಕ್ ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಮಾಡಿ ಅದಕ್ಕೆ ಹಿರಿಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೂಡ ಟಾಸ್ಕ್ ಫೋರ್ಸ್ ರಚನೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸುಮಾರು 1 ಲಕ್ಷ ಎಕರೆಗೂ ಹೆಚ್ಚು ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಕೇವಲ 30 ಸಾವಿರ ಎಕರೆಯಷ್ಟೇ ಉಳಿದಿದೆ. ವಕ್ಫ್ ಆಸ್ತಿ ಕಬಳಿಕೆ ತಪ್ಪಿಸಲು ಟಾಸ್ಕ್ ಫೋರ್ಸ್ ರಚನೆ ಅಗತ್ಯ ಎಂದರು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜುಬುಲ್ಲಾ ಜಫಾರಿ ಇದ್ದರು.