ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸದ್ಯ ರಾಜ್ಯದಲ್ಲಿ ಚುನಾವಣೆ ನಡೆದರೇ ನಿಶ್ಚಿತವಾಗಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ನಗರದ ಬಿ.ವಿ.ವಿ ಸಂಘ ಮಿನಿ ಸಭಾಭವನದಲ್ಲಿ ನಡೆದ ಬಿಜೆಪಿ ಮಹಾಸದಸ್ಯತಾ ಅಭಿಯಾನದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಸಭೆಯಲ್ಲಿ ಮಾತನಾಡಿದ ಅವರು, ಸಂಬಳ ನೀಡಲೂ ಸಹ ಕೈಲಾಗದ ಏಕೈಕ ಸರ್ಕಾರ ಎಂದರೇ ರಾಜ್ಯದ ಕಾಂಗ್ರೆಸ್ ಸರ್ಕಾರ. ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರ ಬಳಿಕ ಈಗ ಮಹರ್ಷಿ ವಾಲ್ಮೀಕಿ ನಿಗಮದ ನೌಕರರು ಸಹ ಸಂಬಳ ಸಿಗದೆ ಹತಾಶರಾಗಿದ್ದಾರೆ. ಜತೆಗೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಜನ ಬೇಸತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಚುನಾವಣೆ ನಡೆದರೇ ಬಿಜೆಪಿ ಪಕ್ಷ ಖಂಡಿತ ಅಧಿಕಾರಕ್ಕೆ ಬರಲಿದೆ ಎಂದರು.ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ದಾಖಲೆಯ ಪ್ರಮಾಣದ ಸದಸ್ಯತ್ವ ನೋಂದಣೆ ಪ್ರತಿ ಕಾರ್ಯಕರ್ತರ ಸಂಕಲ್ಪವಾಗಲಿ. ದೇಶಾದ್ಯಂತ ನಡೆಯುತ್ತಿರುವ 2ನೇ ಹಂತದ ಐತಿಹಾಸಿಕ ಸದಸ್ಯತಾ ಅಭಿಯಾನದಲ್ಲಿ ಹೆಮ್ಮೆಯ ಪ್ರದಾನಿ ನರೇಂದ್ರ ಮೋದಿಜೀ ಅವರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಬೆಂಬಲ ನೀಡಲು ಬಾಗಲಕೋಟೆ ಮತಕ್ಷೇತ್ರದಿಂದ ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ನಿರೀಕ್ಷೀತ ಗುರಿ ತಲುಪುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಪ್ರಾಸ್ತಾವಿಕ ಮಾತನಾಡಿ, ಸದಸ್ಯತಾ ಅಭಿಯಾನದ ನೋಂದಣಿ ಮಾಡುವ ಕುರಿತು ಮಾಹಿತಿ ತಿಳಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಗರಸಭೆ ಸಭಾಪತಿ ಯಲ್ಲಪ್ಪ ನಾರಾಯಣಿ ಹಾಗೂ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಕೋಶಾಧ್ಯಕ್ಷ ಶ್ರೀಕಾಂತ ಪತ್ತಾರ, ಕಾರ್ಯದರ್ಶಿ ಭೀಮಶಿ ಮೋರೆ ಅವರಿಗೆ ಸನ್ಮಾನಿಸಲಾಯಿತು.ಸಭೆಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಬಸವರಾಜ ಯಂಕಂಚಿ, ಡಾ.ಎಂ.ಎಸ್.ದಡ್ಡೆನ್ನವರ, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಭಾಗೀರತಿ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ಸತ್ಯನಾರಾಯಣ ಹೇಮಾದ್ರಿ, ಉಮೇಶ ಹಂಚಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.