ಮಕ್ಕಳ ಸಂತೆಯಲ್ಲಿ ಜೋರಾಗಿಯೇ ನಡೆದ ಸೊಪ್ಪು ತರಕಾರಿ ಖರೀದಿ

KannadaprabhaNewsNetwork | Published : Oct 6, 2024 1:21 AM

ಸಾರಾಂಶ

ರೋಟರಿ ಮಿಸ್ಟಿ ಹಿಲ್ಸ್‌ ಸಹಯೋಗದಲ್ಲಿ ಶನಿವಾರ ಮಕ್ಕಳ ಸಂತೆ ಗಮನ ಸೆಳೆಯಿತು. ಮಕ್ಕಳ ವ್ಯಾಪಾರ, ವಹಿವಾಟು ಜೋರಾಗಿಯೇ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರ ದಸರಾ ಸಮಿತಿ, ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಶನಿವಾರ ಮಕ್ಕಳ ಸಂತೆ ಗಮನ ಸೆಳೆಯಿತು.

ನಗರದ ಗಾಂಧಿ ಮೈದಾನದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳ ವ್ಯಾಪಾರ, ವ್ಯವಹಾರ ವಹಿವಾಟು ಜೋರಾಗಿಯೇ ನಡೆಯಿತು. ಸುಮಾರು 680 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡವು ನೋಂದಣಿ ಮಾಡಿಕೊಂಡು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪಾಲಕ್, ಮೆಂತೆ, ಸಬ್ಸಿಗೆ, ದಂಡು, ಕೀರೆ, ಗಣಿಕೆ, ನೊಗ್ಗೆ, ಬಸಳೆ, ಎಲೆಕೋಸು, ವೀಳ್ಯದೆಲೆಯಿಂದ ಹಿಡಿದು ಎಲ್ಲ ರೀತಿಯ ಸೊಪ್ಪುಗಳು, ತರಕಾರಿ ವಿಭಾಗದಲ್ಲಿ ಕುಂಬಳ, ಬೂದುಕುಂಬಳ, ಸೌತೆಕಾಯಿ, ಸೋರೆಕಾಯಿ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳಲ್ಲಿ ಬಾಳೆ, ಕಿತ್ತಳೆ, ಚಕೋತಾ, ಸೇಬು, ಮತ್ತೊಂದು ಬದಿಯಲ್ಲಿ ಪಾನಿಪೂರಿ, ಮಸಾಲಪೂರಿ, ಕಜ್ಜಾಯ, ರವೆಉಂಡೆ, ಚಕ್ಕುಲಿ, ನೊಪ್ಪಿಟ್ಟು ಸೇರಿದಂತೆ ವಿವಿಧ ರೀತಿಯ ತಂಪು ಪಾನೀಯ ಹೀಗೆ ಒಂದು ಬದಿಯಲ್ಲಿ ಸೊಪ್ಪು ತರಕಾರಿ ಇದ್ದರೆ, ಮತ್ತೊಂದು ಬದಿಯಲ್ಲಿ ತಿಂಡಿ ತಿನಿಸು ವ್ಯಾಪಾರ ಎಲ್ಲರನ್ನು ಆಕರ್ಷಣಿಯಗೊಳಿಸಿತು. ಜೊತೆಗೆ ತಿಂಡಿ ತಿನಿಸುಗಳು ಪ್ರತಿಯೊಬ್ಬರ ಬಾಯಲ್ಲಿ ನೀರು ಭರಿಸುವಂತೆ ಮಾಡಿತ್ತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹಲವು ರೀತಿಯ ಹಣ್ಣುಗಳು, ತರಕಾರಿ ಹಾಗೂ ಮಕ್ಕಳು ಚಿತ್ರ ಬಿಡಿಸಿದ ಚಿತ್ರಗಳನ್ನು ಖರೀದಿ ಮಾಡಿದರು.

ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಸೊಪ್ಪು, ಹಣ್ಣು ಕೊಳ್ಳುವ ಸಂದರ್ಭದಲ್ಲಿ ನಿಗದಿತ ಬೆಲೆಗಿಂತ 10 ರೂ. ಕಡಿಮೆ ಮಾಡುತ್ತೇವೆ, ತೆಗೆದುಕೊಳ್ಳಿ ಸರ್ ಎಂದು ಮಕ್ಕಳು ವ್ಯಾಪಾರ ಮಾಡುತ್ತಿದ್ದು ಮಕ್ಕಳಲ್ಲಿನ ವ್ಯಾಪಾರದ ಮನೋಭಾವ ಎದ್ದು ಕಂಡಿತು. ಮಕ್ಕಳಲ್ಲಿನ ಕ್ರಿಯಾಶೀಲತೆ, ವ್ಯಾಪಾರ ವಹಿವಾಟು ಮನೋಭಾವ ನಿಜಕ್ಕೂ ಗಮನಸೆಳೆಯಿತು.

ಮಕ್ಕಳ ಸಂತೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದು, ಮಕ್ಕಳ ಸಂತೆ ಏರ್ಪಡಿಸುವಲ್ಲಿ ಸಂಘಟಕರ ಶ್ರಮ ಎದ್ದು ಕಾಣುತ್ತಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಮಕ್ಕಳು ಪಾಲ್ಗೊಂಡಿದ್ದರು.

‘ಹಸಿರೇ ಉಸಿರು, ನೈಸರ್ಗಿಕವಾಗಿ ಬೆಳೆಸಿರುವ ತರಕಾರಿ ಸೇವಿಸಿ, ಚಿಂತೆಯಿಲ್ಲದ ಮಕ್ಕಳ ಸಂತೆ, ಹೀಗೆ ವಿವಿಧ ರೀತಿಯ ಷೋಷವಾಕ್ಯಗಳು ಮಕ್ಕಳ ಸಂತೆಯಲ್ಲಿ ಕಂಡುಬಂದವು.

ಮಕ್ಕಳ ಸಂತೆ ಸಂದರ್ಭದಲ್ಲಿ ಮಡಿಕೇರಿ ದಸರಾ ಮಂಟಪವೇ ಕಣ್ತುಂಬಿಕೊಳ್ಳುವಂತೆ ಕಿರುಮಂಟಪ ಮಾದರಿಯಲ್ಲಿ ಐತಿಹಾಸಿಕ ಸಂದೇಶ ಸಾರಿದ್ದು ವಿಶೇಷವಾಗಿತ್ತು, ಪೌರಾಣಿಕ ಮಂಟಪ ಮೂಲಕ ಚಿತ್ರಣ ಗಮನ ಸೆಳೆಯಿತು. ಮಕ್ಕಳ ಕೌಶಲ್ಯ, ಜ್ಞಾನ ಭಂಡಾರ ಮೆಚ್ಚುವಂತಿತ್ತು.

ಹಾಗೆಯೇ ಮಕ್ಕಳ ಮಂಟಪ, ಮಕ್ಕಳ ಅಂಗಡಿ, ಛದ್ಮವೇಷ ಸ್ಪರ್ಧೆಯಲ್ಲಿ ಸ್ವಾಮಿ ವಿವೇಕಾನಂದ, ಕೊಡಗಿನ ಸಾಂಪ್ರದಾಯಿಕ ಉಡುಪಿನಲ್ಲಿ ಮಕ್ಕಳು ಪಾಲ್ಗೊಂಡಿದ್ದು ಗಮನ ಸೆಳೆಯಿತು. ಕ್ಲೇ ಮಾಡಲಿಂಗ್ ಸ್ಪರ್ಧೆಗಳು ನಡೆದವು. ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ಮಕ್ಕಳಿಂದ ವಾದ್ಯ ವೈವಿಧ್ಯ ಜರುಗಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅವರು ಮಕ್ಕಳ ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ಮಡಿಕೇರಿ ದಸರಾ ಅಂತರ್ಜಾಲ ಮೂಲಕ ಎಲ್ಲೆಡೆ ಪಸರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.

ದಕ್ಷಿಣ ವಲಯದ ಡಿಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ., ನಗರಸಭೆ ಮಾಜಿ ಅಧ್ಯಕ್ಷರಾದ ಅನಿತಾ ಪೂವಯ್ಯ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಪೊನ್ನಚ್ಚನ ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್ನ ಕಿರಣ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ಇತರರು ಮಕ್ಕಳ ಸಂತೆ ವೀಕ್ಷಿಸಿದರು.

Share this article