ರಾಜಕೀಯ ಒತ್ತಡದಿಂದ ನೋವಾಗಿ ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ರಮೇಶ ಕತ್ತಿ

KannadaprabhaNewsNetwork |  
Published : Oct 06, 2024, 01:21 AM IST
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿದರು. | Kannada Prabha

ಸಾರಾಂಶ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್‌ನ ಆಡಳಿತದಲ್ಲಿ ರಾಜಕೀಯ ಒತ್ತಡದಿಂದ ನೋವಾಗಿ ರಾಜೀನಾಮೆ ನೀಡಿದ್ದೇನೆ ಎಂದು ನಿರ್ಗಮಿತ ನಿಕಟಪೂರ್ವ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್‌ನ ಆಡಳಿತದಲ್ಲಿ ರಾಜಕೀಯ ಒತ್ತಡದಿಂದ ನೋವಾಗಿ ರಾಜೀನಾಮೆ ನೀಡಿದ್ದೇನೆ ಎಂದು ನಿರ್ಗಮಿತ ನಿಕಟಪೂರ್ವ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನಲ್ಲಿ ಯಾವುದೇ ಬಣ ರಾಜಕಾರಣವಿಲ್ಲ. ತಮ್ಮ ಹಾಗೂ ಡಿಸಿಸಿ ಬ್ಯಾಂಕಿನ ಜೊತೆಗಿನ 42 ವರ್ಷದಲ್ಲಿ ಇಂಥ ಪರಿಸ್ಥಿತಿ ಬಂದಿರಲಿಲ್ಲ. ನೋವಿನಿಂದ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಹೊಸ ಸದಸ್ಯತ್ವ ಮಾಡುವ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಅದು ಅತಿರೇಕಕ್ಕೆ ಹೋದ ಕಾರಣ ರಾಜಕಾರಣ ಒತ್ತಡದಿಂದ ನಾನೇ ರಾಜೀನಾಮೆ ಸಲ್ಲಿಸುವ ನಿರ್ಧಾರ ಮಾಡಿದೆ. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಚರ್ಚೆಯೇ ಆಗಿಲ್ಲ. ಯಾವೊಬ್ಬ ನಿರ್ದೇಶಕರು ನನ್ನ ವಿರೋಧಿ ಕೆಲಸ ಮಾಡಿಲ್ಲ. ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

27 ವರ್ಷ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೆ 60 ವರ್ಷ ಆದ ಕಾರಣ ರಾಜೀನಾಮೆ ನೀಡಿದ್ದೇನೆ. ಡಿಸಿಸಿ ಬ್ಯಾಂಕ್ ಸದೃಢವಾಗಿದೆ. ಗ್ರಾಹಕ-ಸದಸ್ಯರು ಯಾವುದೇ ಉಹಾಪೋಹ-ವದಂತಿಗಳಿಗೆ ಕಿವಿಗೊಡಬಾರದು. ಹೂಡಿಕೆ ಮಾಡಿರುವ ಠೇವುಗಳನ್ನು ವಾಪಸ್ ಪಡೆಯಬಾರದು ಎಂದು ಮನವಿ ಮಾಡಿದರು.

ಹೊಸಬರಿಗೆ ಅವಕಾಶ ಕಲ್ಪಿಸಲು ರಾಜೀನಾಮೆ ನೀಡಿದ್ದೇನೆ. ಎಲ್ಲ ನಿರ್ದೇಶಕರು ಒಗ್ಗಟ್ಟಾಗಿದ್ದು ಎಲ್ಲರ ಜೊತೆ ವಿಚಾರ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ. ಬ್ಯಾಂಕಿನ ಹಿತದೃಷ್ಟಿಯಿಂದ ಬ್ಯಾಂಕ್‌ನ ಅಧಿಕಾರಿ-ಸಿಬ್ಬಂದಿಗಳೊಂದಿಗೆ ತಪ್ಪಾಗಿ ನಡೆದುಕೊಂಡಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಜಿಲ್ಲೆಯ ಹಿರಿಯರಾದ ಪ್ರಕಾಶ ಹುಕ್ಕೇರಿ, ಪ್ರಭಾಕರ ಕೋರೆ, ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ತಮ್ಮನ್ನೊಳಗೊಂಡ ಎಲ್ಲ ನಿರ್ದೇಶಕರ ಒಮ್ಮತದ ಅಭಿಪ್ರಾಯದ ಮೇರೆಗೆ ಹೊಸ ಅಧ್ಯಕ್ಷರನ್ನು ಶೀಘ್ರವೇ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಈ ವೇಳೆ ಹಿರಿಯರಾದ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ಪವನ ಕತ್ತಿ, ಜಯಗೌಡ ಪಾಟೀಲ, ಸತ್ಯಪ್ಪಾ ನಾಯಿಕ, ಎ.ಕೆ.ಪಾಟೀಲ, ರಾಜು ಮುನ್ನೋಳಿ, ರಾಚಯ್ಯಾ ಹಿರೇಮಠ, ಗುರುರಾಜ ಕುಲಕರ್ಣಿ, ರವೀಂದ್ರ ಹಿಡಕಲ್, ರಾಯಪ್ಪ ಡೂಗ, ಶೀತಲ್ ಬ್ಯಾಳಿ, ರಾಮಣ್ಣಾ ಗೋಟೂರೆ, ರಾಜು ಬಿರಾದಾರಪಾಟೀಲ, ಗಿರೀಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ