ಬಿ. ಶೇಖರ್ ಗೋಪಿನಾಥಂ
ರೈತರ ಜಾನುವಾರುಗಳಿಗೆ ವಿಮೆ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿರುವ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಶನಿವಾರ ನಡೆದ ರೈತ ದಸರಾ ವೇದಿಕೆ ಕಾರ್ಯಕ್ರಮವನ್ನು ನವಧಾನ್ಯ ಸುರಿದು, ಹೊಂಬಾಳೆಯನ್ನು ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳು ರೈತರಿಗೆ ಸಹಕಾರಿಯಾಗುತ್ತಿದ್ದು, ಮುಂದೆ ರೈತರ ಜಾನುವಾರುಗಳಿಗೆ ವಿಮೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತದೆ ಎಂದರು.ಕೆಲವು ರೈತರು ಸಾಕಿರುವ ಹಳ್ಳಿಕಾರ್ ಎತ್ತುಗಳಿಗೆ 8 ರಿಂದ 10 ಲಕ್ಷ ಇದೆ. ಆಕಸ್ಮಿಕವಾಗಿ ಅವು ಮೃತಪಟ್ಟರೆ ರೈತರಿಗೆ ಆ ನಷ್ಟ ಭರಿಸಲಾಗಲ್ಲ. ಹೀಗಾಗಿ, ವಿಮೆಯನ್ನು ಜಾರಿಗೆ ತರುವಂತೆ ವೇದಿಕೆಯಲ್ಲಿದ್ದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರಲ್ಲಿ ಮನವಿ ಮಾಡಿದ ಅವರು, ಈ ವಿಚಾರವನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ಜಾರಿಗೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಮ್ಮದು ಜನಸಾಮಾನ್ಯರ, ರೈತರ ಪರ ಸರ್ಕಾರ. ಕೃಷಿ ಕ್ಷೇತ್ರದ ಸುಧಾರಣೆಗೆ ಅತೀ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
ಕೃಷಿ ಯಾಂತ್ರೀಕರಣದ ಪರಿಣಾಮಕಾರಿ ಅಳವಡಿಕೆ ಅಗತ್ಯ. ಕೃಷಿ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಕೃಷಿಕರು ಸಾಂಪ್ರದಾಯಿಕ ಕೃಷಿ ಜೊತೆಗೆ ಸಮಗ್ರ ಬೇಸಾಯಕ್ಕೆ ಒತ್ತು ನೀಡಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ಪಾದನೆಯ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದು ಅವರು ಕರೆ ನೀಡಿದರು.
ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ರೈತರ ದಸರಾ ಉಪ ಸಮಿತಿಯ ಅಧ್ಯಕ್ಷ ಕರೀಗೌಡ, ಉಪಾಧ್ಯಕ್ಷರಾದ ಎನ್. ಶಿವಕುಮಾರ್, ಜಾಕೀರ್ ಪಾಷಾ, ಎಚ್.ಕೆ. ಮಂಜುನಾಥ್, ಹರೀಶ್ ಮೊಗಣ್ಣ, ಉಪ ವಿಶೇಷಾಧಿಕಾರಿ ಡಾ.ಎಂ. ಕೃಷ್ಣರಾಜು ಮೊದಲಾದವರು ಇದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ ಸ್ವಾಗತಿಸಿದರು.ಕೃಷಿಕರ ಆದಾಯದಲ್ಲಿ ವೃದ್ಧಿಯಾಗಬೇಕು. ವೈಜ್ಞಾನಿಕ ಬೆಲೆ ದೊರೆಯುವ ಜೊತೆಗೆ ಸರ್ವ ಋತು ವರಮಾನ ಬರುವಂತೆ ಬೇಸಾಯ ಪದ್ಧತಿ ಅಳವಡಿಕೆಯಾಗಬೇಕು. ಇದಕ್ಕಾಗಿ ಕೃಷಿಕರು ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು. ಹೈನುಗಾರಿಕೆ ಕುರಿ, ಕೋಳಿ, ಹಂದಿ, ಮೀನು, ಜೇನು ಸಾಕಾಣಿಕೆಗಳ ಬಗ್ಗೆಯೂ ಗಮನ ಹರಿಸಬೇಕು. ಆಗ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ.
- ಕೆ. ವೆಂಕಟೇಶ್, ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ