ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಯಾವುದೇ ಸಂಘಟನೆಯು ಬಲಿಷ್ಠವಾಗಿರಲು ಮತ್ತು ಪ್ರಗತಿ ಹೊಂದಲು ದಕ್ಷತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಅತ್ಯಗತ್ಯ. ರಬಕವಿ-ಬನಹಟ್ಟಿ ಶಾಖೆಯು ತಾಲೂಕಿನ ಎಲ್ಲ ನೌಕರರಿಗೆ ಪ್ರೀತಿ ಪಾತ್ರವಾಗಿದೆ. ಹೊಸ ತಾಲೂಕು ಕೇಂದ್ರವಾಗಿದ್ದರೂ ನೌಕರರ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಸಕ್ರಿಯವಾಗಿರಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲೇ ಮಂಚೂಣಿಯಲ್ಲಿರುವ ಸಂಘವಾಗಿದೆ ಎಂದು ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.ಯಲ್ಲಟ್ಟಿ ಗ್ರಾಮದ ವಿಶ್ವಭಾರತಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ರಬಕವಿ-ಬನಹಟ್ಟಿ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘದ ಕ್ರೀಯಾಶೀಲತೆಗೆ ಸದಸ್ಯರ ಬೆಂಬಲ ಹಾಗೂ ಪಾಲ್ಗೊಳ್ಳುವಿಕೆ ಮುಖ್ಯವೆಂದರು. ತಾಲೂಕು ಶಾಖೆಯ ಅಧ್ಯಕ್ಷ ಬಸವರಾಜ ಹನಗಂಡಿ ಸರ್ಕಾರಿ ನೌಕರರ ಎನ್.ಪಿ.ಎಸ್. ಹೋಗಲಾಡಿಸಿ ಓಪಿಸಿ ಜಾರಿ ಹಾಗೂ ಕೇಂದ್ರ ಮಾದರಿ ವೇತನಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು. ಜಿಲ್ಲಾ ಕಾರ್ಯದರ್ಶಿ ವಿಠ್ಠಲ ವಾಲಿಕಾರ ಹಾಗೂ ಜಮಖಂಡಿ ತಾಲೂಕು ಅಧ್ಯಕ್ಷ ಪಿ.ಬಿ.ಅಜ್ಜನವರ ಹಾಗೂ ನಿವೃತ್ತ ಪ್ರಾಚಾರ್ಯ ಶರತ ಜಂಬಗಿ ಮಾತನಾಡಿದರು.ಜಿಲ್ಲಾ ನಿರ್ದೇಶಕ ಎಂ.ಎಸ್.ಗಡೆನ್ನವರ ನಾಡಗೀತೆ ಹಾಡಿದರು. ಸಂಘದ ರಾಜ್ಯ ಪರಿಷತ್ ಸದಸ್ಯರಾದ ಪ್ರಶಾಂತ ಹೊಸಮನಿ ಸ್ವಾಗತಿಸಿದರು, ಖಜಾಂಚಿ ಮಹೇಶ ಬಾಗಲಕೋಟೆ ಇವರು ವಾರ್ಷಿಕ ಲೆಕ್ಕ ಪತ್ರಕ್ಕೆ ಅನುಮೋದನೆಯನ್ನು ಪಡೆದರು. ಮಲ್ಲಿಕಾರ್ಜುನ ಖವಟಕೊಪ್ಪ ವಂದಿಸಿದರು. ವೇದಿಕೆಯ ಮೇಲೆ ವಿಶ್ವಭಾರತಿ ಇಂಟರ್‌ನ್ಯಾಶಲ್ ಶಾಲೆಯ ಅಧ್ಯಕ್ಷ ಸದಾಶಿವ ಸಂತಿ, ಜಿಲ್ಲಾ ಖಜಾಂಚಿ ಗೋಪಾಲ ನೀಲನಾಯಕ, ರಾಜ್ಯ ಸಂಘದ ಐ.ಎ.ಡಾಂಗೆ ಮತ್ತು ಇತರರು ಉಪಸ್ಥಿತರಿದ್ದರು.