ಕನ್ನಡಪ್ರಭ ವಾರ್ತೆ ಮೈಸೂರುಭವಿಷ್ಯದ ಉತ್ತಮವಾದ ಆದರ್ಶ ಪ್ರಜೆಗಳ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.ಮೈಸೂರು ತಾಲೂಕು ಜಯಪುರ ಶ್ರೀ.ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1994-95ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ''''''''ಗುರುವಂದನಾ ಹಾಗೂ ಸ್ನೇಹ ಭಾವಯಾನ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.ಶಾಲೆಯ ಹಳೆಯ ವಿದ್ಯಾರ್ಥಿಗಳು ಮೂರು ದಶಕಗಳ ನಂತರ ಒಟ್ಟುಗುಡಿ ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಶಾಲೆಯ ವೇದಿಕೆಯಲ್ಲಿ ಕರೆತಂದು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವಿಸಿರುವುದು ಹೃದಯಸ್ಪರ್ಶಿಯಾಗಿದೆ.ಹಳೆಯ ವಿದ್ಯಾರ್ಥಿಗಳ ಶಾಲೆಗೆ ಬಂದು ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ನಿಂತು ಬಿಳಿ ವಸ್ತ್ರ ಧರಿಸಿ ಶಿಸ್ತಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನೋಡಿದರೆ,ಈ ಶಾಲೆಯ ಶಿಕ್ಷಕರು ಕಲಿಸಿದ ಸಂಸ್ಕೃತಿ ಯಾಗಿದೆ ಎಂದು ಅವರು ಶ್ಲಾಘಿಸಿದರು.
ಆದರ್ಶ ಶಿಕ್ಷಕರಿಂದ ಮಾತ್ರ ದೇಶದಲ್ಲಿ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ರಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ,ಮೈಸೂರಿಂದ ತೆರಳುವಾಗ ತಮ್ಮ ಮೆಚ್ಚಿನ ವಿದ್ಯಾರ್ಥಿಗಳು ಸಾರೋಟಿನಲ್ಲಿ ಮೆರವಣಿಗೆ ಮಾಡಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬೀಳ್ಕೊಟ್ಟರು.ಶಿಕ್ಷಕರಾದವರಿಗೆ ಇವೆಲ್ಲವು ಅವಿಸ್ಮರಣೀಯ ಕ್ಷಣಗಳು ಎಂದರು.ಯಾವುದೇ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ವಿಯಾಗುತ್ತಾರೆ.ಶಿಕ್ಷಕರನ್ನು ಗೌರವಿಸಿದಾಗ ಮಾತ್ರ ಗುರು ದೇವೋಭವ ಕ್ಕೆ ಅರ್ಥ ಬರುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಜೀವನದ ಪಾಠ ಚನ್ನಾಗಿ ತಿಳಿದಿರುತ್ತಾರೆ. ಬಹು ಹಿಂದಿನಿಂದಲೂ ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿರುವ ಗಣ್ಯರೆಲ್ಲರೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವರಾಗಿದ್ದಾರೆ.ಗುರು ಪರಂಪರೆಯು ಗತಕಾಲದಿಂದ ಬಳುವಳಿಯಾಗಿ ಬಂದಿದೆ.ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು.ಮಕ್ಕಳಿಗೆ ಶಿಕ್ಷಕರ ಬಗ್ಗೆ ಪೂಜ್ಯನಿಯ ಭಾವನೆ ಬರಬೇಕು. ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಶಿಸ್ತು,ಏಕಾಗ್ರತೆ, ವಿಧೇಯತೆ, ಸಂಯಮ,ಬದ್ಧತೆ ಇರಬೇಕು. ರಾಷ್ಟ್ರೀಯತೆ ಮೈಗೂಡಿಸಿಕೊಳ್ಳಬೇಕು.ವಿಷಯ ಜ್ಞಾನ, ತಾಳ್ಮೆ, ಶುದ್ಧ ನಡತೆ, ಆತ್ಮವಿಸ್ವಾಸ,ಆಸಕ್ತಿ, ಕಠಿಣ ಪರಿಶ್ರಮ ಇರಬೇಕು.ಗುರಿ ಉದ್ದೇಶಗಳು ಸ್ಪಷ್ಟವಾಗಿರಬೇಕು. ಮೊಬೈಲ್ ಮತ್ತು ಟಿವಿ ಗೀಳು ಬಿಡಬೇಕು.ಪತ್ರಿಕೆಗಳನ್ನು ಓದಬೇಕು.ಗ್ರಂಥಾಲಯ ಬಳಕೆ ಹೆಚ್ಚುಮಾಡಿ ಜ್ಞಾನ ಸಂಪಾದಿಸಬೇಕು.ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು,ಮಾನವೀಯ ಮೌಲ್ಯ ಹೆಚ್ಚಿಸಿಕೊಂಡು,ಸುತ್ತಮುತ್ತಲ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.ತಂದೆ. ತಾಯಿ,ಸಂಬಂದಿಕರು ಮತ್ತು ನೆರೆಹೊರೆ ಯವರ ಬಗ್ಗೆ ಒಳ್ಳೆಯ ಭಾವನೆ ಹೊಂದಬೇಕು.ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮೂಲಕ ಐಎಎಸ್, ಐಪಿಎಸ್,ಕೆಎಎಸ್ ಉನ್ನತ ಹುದ್ದೆಗಳನ್ನು ಕಷ್ಟಪಟ್ಟು ಓದಿ ಪಡೆಯಬೇಕು.ಭಾರತದ ಮಕ್ಕಳ ಬುದ್ಧಿಮತ್ತೆ ಯು ಪ್ರಸ್ತುತ ಚಾಲ್ತಿಯಲ್ಲಿರುವ ''''''''ಎಐ'''''''' ತಂತ್ರಜ್ಞಾನಕ್ಕಿಂತಲೂ ಹೆಚ್ಚಿದೆ ಎಂದರು.
ನಿವೃತ್ತ ವಿಜ್ಞಾನ ಶಿಕ್ಷಕರಾದ ಬಿ.ವಿ ನಂಜುಂಡಸ್ವಾಮಿ ಮಾತನಾಡಿ, ಪ್ರೀತಿಪಾತ್ರ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹೆಸರಲ್ಲಿ ನಮಗೆ ಸನ್ಮಾನಿಸಿ ನೀಡಿರುವ ಗೌರವವು ಭಾರತ ರತ್ನ ಪ್ರಶಸ್ತಿ ಪಡೆದಷ್ಟೇ ಖುಷಿಯಾಗುತ್ತಿದೆ ಎಂದರು.
ಕಾರ್ಯಕ್ರಮ ದಲ್ಲಿ ನಿವೃತ್ತ ಸಹಶಿಕ್ಷಕರಾದ ಎಸ್.ಎಸ್ ವಾಗೀಶನ್, ಸಿ.ಎನ್ ಬಾಲಕೃಷ್ಣ, ವೈ.ಜೆ ದೇವರಾಜೆಗೌಡ,ಮಾದಪ್ಪ ಸ್ವಾಮಿ,ಆರ್. ಜಯಶೇಖರ್, ಪ್ರವೀಣ್ ಕುಮಾರ್,ಎ.ಎನ್. ಸುನಂದಾ, ಸವಿತಾ, ನಿರ್ಮಲಾ, ನಿವೃತ್ತ ಭೋಧಕೇತರ ಸಿಬ್ಬಂದಿಗಳಾದ ನಂಜಯ್ಯ, ರೇಣುಕಾ,ಶಿವರಾಜು ನಾಯಕ ಹಾಗೂ ರಾಘವೇಂದ್ರ ಶಾಲೆ ಮುಖ್ಯಶಿಕ್ಷಕ ಬಿ.ಸಿದ್ದರಾಮು ಸಹಶಿಕ್ಷಕರಾದ ಎಂ.ಕೆ ಭಾಗ್ಯ,ಮಹಾಲಕ್ಷ್ಮಿ,ಕೆ.ಎನ್ ಸಿದ್ದೇಗೌಡ,ಹೇಮಂತ್ ಮತ್ತು ಅಡುಗೆ ಸಿಬ್ಬಂದಿಗಳನ್ನು 1994-95ನೇ ಸಾಲಿನ ವಿದ್ಯಾರ್ಥಿಗಳು ಫಲಪುಷ್ಪ ನೀಡಿ ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಸಿಹಿಖಾದ್ಯದ ಊಟ ಬಡಿಸಿದರು.ಕಾರ್ಯಕ್ರಮದಲ್ಲಿ 60ಕ್ಕು ಹೆಚ್ಚು ಹಳೆಯ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.