ಮಂಡ್ಯ : ಈತ ಮದ್ದೂರು ತಾಲೂಕು ಆತಗೂರು ಪಂಚಾಯ್ತಿ ಪಿಡಿಒ. ಇವನ ಐಷಾರಾಮಿ ಲೈಫ್‌ಸ್ಟೈಲ್ ಎಲ್ಲರ ಹುಬ್ಬೇರಿಸಿದೆ. ಯಾವ ಸಿನಿಮಾ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲವೆಂಬಂತೆ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾ, ಫೋಟೋಶೂಟ್ ನೀಡಿರುವುದು ವಿವಾದಕ್ಕೆ ಗುರಿಯಾಗಿದೆ. ಸರ್ಕಾರಿ ಅಧಿಕಾರಿಯ ಬಿಂದಾಸ್ ಜೀವನ ಶೈಲಿಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಆತಗೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಶಿಧರ್ ಅಲಿಯಾಸ್ ಶಶಿಗೌಡ ವಿವಾದಕ್ಕೆ ಸಿಲುಕಿರುವ ಪಿಡಿಒ. ಬಾಡಿ ಬಿಲ್ಡ್ ಮಾಡಿಕೊಂಡು, ಜಿಮ್‌ನಲ್ಲಿ ಸುಂದರಿ ಜೊತೆ ಸಿಕ್ಸ್‌ಪ್ಯಾಕ್ ಷೋ ಕೊಡುತ್ತಾ, ಸೆಲೆಬ್ರಿಟಿಗಳನ್ನೂ ನಾಚಿಸುವಂತೆ ವೀಡಿಯೋ, ಫೋಟೋಗಳಲ್ಲಿ ಬಿಲ್ಡಪ್ ಕೊಟ್ಟಿದ್ದಾನೆ. ಸಿನಿಮಾ ಹೀರೋ ಆಗುವ ಆಸೆಯೊಂದಿಗೆ ಕೈಯ್ಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿಕೊಂಡು ಹತ್ತಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾನೆ. ಸರ್ಕಾರಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತನ್ನ ಐಷಾರಾಮಿ ಜೀವನವನ್ನು ಪ್ರದರ್ಶಿಸಿಕೊಳ್ಳುತ್ತಿರುವುದು ಕಾನೂನುಬಾಹೀರ ಎಂದು ಹೇಳಲಾಗುತ್ತಿದೆ.
ತಾನು ಖರೀದಿಸಿದ ದುಬಾರಿ ಹೊಸ ಇನ್ನೋವಾ ಕಾರು ಸ್ವೀಕರಿಸುವುದರಲ್ಲೂ ಈತ ಎಲ್ಲರಿಗಿಂತ ಡಿಫರೆಂಟ್. ಅದಕ್ಕಾಗಿ ಪ್ರತ್ಯೇಕ ವಿಡಿಯೋ ಶೂಟ್ ಮಾಡಿಸಿದ್ದಾನೆ. ಈ ಶೂಟಿಂಗ್‌ಗಾಗಿ ಸುತ್ತಲೂ ಬಾಡಿ ಬಿಲ್ಡರ್ಸ್, ಬೌನ್ಸರ್ ಇಟ್ಟುಕೊಂಡು ಓಡಾಡಿದ್ದಾನೆ. ಸಿನಿಮಾ ಮಾದರಿಯಲ್ಲೇ ವಿಡಿಯೋಶೂಟ್ ಅದ್ಧೂರಿಯಾಗಿ ಮೂಡಿಬಂದು ಎಲ್ಲರ ಹುಬ್ಬೇರಿಸಿದೆ.
ರಾಜಕಾರಣಿಗಳಿಗೆ ಈತ ಕೊಡೋದು ಬೆಳ್ಳಿ ಕಿರೀಟದಂತಹ ದುಬಾರಿ ಗಿಫ್ಟ್. ಇಷ್ಟೊಂದು ವೈಭವದ ಜೀವನ ನಡೆಸುವ ಇವನ ಆದಾಯ ಅಥವಾ ಹಣದ ಮೂಲ ಮಾತ್ರ ರಹಸ್ಯವಾಗಿದೆ. ಈ ಹಿಂದೆ ಹಣ ದುರುಪಯೋಗ, ಕರ್ತವ್ಯಲೋಪ ಆರೋಪದಡಿ ಪಿಡಿಒ ಶಶಿಧರ್ ಅಮಾನತುಗೊಂಡಿದ್ದನು.
ಆರೋಪಗಳು ಸಾಬೀತಾಗಲಿಲ್ಲ:
ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ, ಬೆಂಡರವಾಡಿ, ಹಲಗೂರು ಪಂಚಾಯ್ತಿಯಲ್ಲಿ ಪಿಡಿಒ ಆಗಿದ್ದ ಸಮಯದಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಅಕ್ರಮ ಎಸಗಿರುವುದು, ಸತ್ತ ವ್ಯಕ್ತಿಗೆ ಹಣ ಪಾವತಿಸಿರುವುದು, ಗ್ರಾಪಂ ಆಸ್ತಿ ರಕ್ಷಣೆಯಲ್ಲಿ ವಿಫಲ, 1 ಕೋಟಿ ರು.ಗೂ ಹೆಚ್ಚು ಹಣ ದುರುಪಯೋಗ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಇಲಾಖೆಯಿಂದ ತನಿಖೆ ನಡೆಸಿದರಾದರೂ ಅದನ್ನು ಆಧಾರ, ಸಾಕ್ಷಿ ಸಹಿತ ಸಾಬೀತು ಮಾಡಲಾಗಲೇ ಇಲ್ಲ. ಪಂಚಾಯ್ತಿಗಾದ ನಷ್ಟವನ್ನು ತುಂಬಿಕೊಡುವಂತೆ ಮಾಡುವಲ್ಲೂ ಮೇಲಿನ ಹಂತದ ಅಧಿಕಾರಿಗಳು ವಿಫಲರಾದರು. ಪರಿಣಾಮ ಇದೀಗ ಕಳೆದ ಮೂರು ತಿಂಗಳಿಂದ ಮದ್ದೂರು ತಾಲೂಕು ಆತಗೂರು ಪಂಚಾಯ್ತಿ ಪಿಡಿಒ ಆಗಿ ಶಶಿಧರ್ ಕರ್ತವ್ಯದಲ್ಲಿ ಮುಂದುವರೆದಿದ್ದಾನೆ.
ಇತ್ತೀಚೆಗಷ್ಟೇ ಕದಲೂರು ಉದಯ್ ಜನ್ಮದಿನಾಚರಣೆ ಆಚರಿಸಿರುವ ಪಿಡಿಒ ಶಶಿಧರ್ ಶಾಸಕರಿಗೆ ಬೆಳ್ಳಿ ಕಿರೀಟಧಾರಣೆ ಮಾಡಿದ್ದಾರೆ. ಕೇಕ್ ಮೇಲೆ ಯು ಬಾಸ್ ಎಂದು ಬರೆಸಿ ಹುಟ್ಟುಹಬ್ಬವನ್ನು ಆಚರಿಸಿರುವುದು ಕಂಡುಬಂದಿದೆ.
ಸರ್ಕಾರಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪಿಡಿಒ ಆಗಿದ್ದುಕೊಂಡು ತಮ್ಮ ಐಷಾರಾಮಿ ಬದುಕನ್ನು ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ಸಾರ್ವಜನಿಕ ಪ್ರದರ್ಶನಕ್ಕಿಡುವುದು ಕಾನೂನುಬಾಹಿರ. ನಿಯಮ ಉಲ್ಲಂಘನೆ ಬಗ್ಗೆ ಪ್ರತ್ಯೇಕ ತಂಡದಿಂದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.
- ಶೇಖ್ ತನ್ವೀರ್ ಆಸಿಫ್, ಸಿಇಒ, ಜಿಲ್ಲಾ ಪಂಚಾಯ್ತಿ