ಬೆಂಗಳೂರು : ನಗರದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಡ್ರಂಕ್ ಅ್ಯಂಡ್ ಡ್ರೈವ್’ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೊಲೀಸರು, ಶುಕ್ರವಾರ ರಾತ್ರಿ ಪಾನಮತ್ತ ಚಾಲಕ, ಸವಾರರ ವಿರುದ್ಧ 297 ಪ್ರಕರಣ ದಾಖಲಿಸಿದ್ದಾರೆ. ನಗರ ಸಂಚಾರ ವಿಭಾಗದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 84 ಮಂದಿ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ 392 ಸಿಬ್ಬಂದಿ ಸೇರಿ ಒಟ್ಟು 476 ಮಂದಿ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ 16,483 ವಿವಿಧ ಮಾದರಿಯ ವಾಹನಗಳನ್ನು ತಪಾಸಣೆ ಮಾಡಿದ್ದು, ಈ ಪೈಕಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 297 ಮಂದಿ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.