ಹಳ್ಳದ ಪಕ್ಕದ ಜಮೀನುಗಳಿಗೂ ಅಟಲ್ ಭೂ ಜಲ ವಿಸ್ತರಣೆ

KannadaprabhaNewsNetwork | Published : Dec 27, 2024 12:47 AM

ಸಾರಾಂಶ

ಕೃಷಿ ಹೊಂಡ ಹೊಂದಿರುವ ರೈತರು ಮತ್ತು ಕೊಳವೆಬಾವಿ ಹೊಂದಿರುವವರಿಗೆ ಮಾತ್ರ ಇದರ ಫಲಾನುಭವಿಗಳಾಗಲು ಸಾಧ್ಯ ಎನ್ನುವ ನಿಯಮ

ಶಿವಕುಮಾರ ಕುಷ್ಟಗಿ ಗದಗ

ಕೊಳವೆ ಬಾವಿ, ಕೃಷಿ ಹೊಂಡ ಹೊಂದಿರುವ ರೈತರಿಗೆ ವರದಾನವಾಗಬಲ್ಲ ಅಟಲ್ ಭೂ ಜಲ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿದ್ದು, ಯೋಜನೆಯಡಿಯಲ್ಲಿ ರೈತರಿಗೆ ಒಂದು ಸೆಟ್ ಸ್ಪ್ರಿಂಕ್ಲರ್‌ ಅದಕ್ಕೆ ಬೇಕಾಗುವ ಪೈಪ್ ಸೇರಿದಂತೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈಗಾಗಲೇ ಕೃಷಿ ಹೊಂಡ ಹೊಂದಿರುವ ರೈತರು ಮತ್ತು ಕೊಳವೆಬಾವಿ ಹೊಂದಿರುವವರಿಗೆ ಮಾತ್ರ ಇದರ ಫಲಾನುಭವಿಗಳಾಗಲು ಸಾಧ್ಯ ಎನ್ನುವ ನಿಯಮ ಹಾಕಲಾಗಿದೆ.

ರಾಜ್ಯದಲ್ಲಿಯೇ ಮೊದಲು: ಈ ಯೋಜನೆಯ ವ್ಯಾಪ್ತಿ ಕೊಳವೆಬಾವಿ ಮತ್ತು ಕೃಷಿ ಹೊಂಡ ಹೊಂದಿದವರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ನೀರಿನ ಸದ್ಬಳಕೆಯಾಗಬೇಕು ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಗದಗ ಕೃಷಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಶ್ರಮದಿಂದ ಹಳ್ಳಗಳ ಅಕ್ಕಪಕ್ಕದ 500ಮೀಟರ್ ವ್ಯಾಪ್ತಿಯಲ್ಲಿರುವ ರೈತರ ಜಮೀನುಗಳಿಗೆ ಕೂಡಾ ಯೋಜನೆ ವಿಸ್ತರಿಸಿದ್ದು, ಇದರಿಂದ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಈ ಯೋಜನೆ ವ್ಯಾಪ್ತಿ ಮೀರಿ ರೈತರ ಅನುಕೂಲಕ್ಕೆ ಕಾರಣವಾಗಿದೆ.

ಡಿಐಸಿ ಅನುಮತಿ: ಗ್ರಾಮೀಣ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿದ ವೇಳೆಯಲ್ಲಿ ರೈತರಿಂದ ವ್ಯಕ್ತವಾದ ಅಭಿಪ್ರಾಯ ಸಂಗ್ರಹಿಸಿದ ಕೃಷಿ ಇಲಾಖೆ ಸಿಬ್ಬಂದಿಗಳು, ಅದನ್ನು ತಮ್ಮ ಇಲಾಖೆಗೆ ತಿಳಿಸಿದ್ದಾರೆ. ಆದರೆ ಇದಕ್ಕೆ ಸರ್ಕಾರದ ಹಂತದಲ್ಲಿ ಒಪ್ಪಿಗೆಯ ಅವಶ್ಯಕತೆ ಇರುತ್ತದೆ ಎನ್ನುವ ಲಿಖಿತ ಉತ್ತರ ದೊರೆತ ನಂತರವೂ ಕೈ ಕಟ್ಟಿ ಕುಳಿತುಕೊಳ್ಳದ ಅಧಿಕಾರಿಗಳು, ಇದೇ ವಿಷಯವನ್ನು ಡಿಐಸಿ (ಡಿಸ್ಟ್ರಿಕ್ಟ್‌ ಇರಿಗೇಶನ್ ಕಮಿಟಿ) ಕಮಿಟಿಯಲ್ಲಿ ಚರ್ಚಿಸಿ ಅನುಮತಿ ಪಡೆದು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯ ಗದಗ ಮತ್ತು ರೋಣ ತಾಲೂಕಿನ ವಿವಿಧ ಹಳ್ಳದ ಪಕ್ಕದಲ್ಲಿರುವ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಮಹತ್ವದ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆ.

ಸಣ್ಣ ರೈತರಿಗೆ ಒಂದು ಯುನಿಟ್, ದೊಡ್ಡ ಹಿಡುವಳಿದಾರರಿಗೆ ಎರಡು ಯುನಿಟ್ ಸ್ಪ್ರಿಂಕ್ಲರ್ ಸೆಟ್ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ರೈತರಿಗೆ ಶೇ.90 ರಷ್ಟು ರಿಯಾಯ್ತಿ ಸಿಗಲಿದ್ದು. ಶೇ. 10 ರಷ್ಟು ಹಣ ಮಾತ್ರ ರೈತರು ಭರಿಸಬೇಕಾಗುತ್ತದೆ. ಹಳ್ಳದ ಪಕ್ಕದಲ್ಲಿರುವ ರೈತರು ಕೂಡಾ ಈ ಯೋಜನೆಯ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಗಳ ಸರ್ವೇ ನಂಬರ್ ಜಿಲ್ಲಾ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹಳ್ಳದಲ್ಲಿರುವ ಚೆಕ್ ಡ್ಯಾಂ, ಹಳ್ಳಗಳಲ್ಲಿ ಹರಿಯುವ ನೀರಿನ ಪ್ರಮಾಣ ಆಧಾರಿಸಿ ರೈತರ ಆಯ್ಕೆ ನಡೆಯಲಿದೆ.

ಬೇಡಿಕೆಯೇ ಇಲ್ಲ: ಗದಗ ತಾಲೂಕು ವ್ಯಾಪ್ತಿಯಲ್ಲಿಯೇ 2 ಸಾವಿರ ರೈತರಿಗೆ ಅಟಲ್ ಭೂ ಜಲ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅವಕಾಶವಿದೆ. ಇದಕ್ಕಾಗಿ ಬೇಕಾಗುವ ಅನುದಾನವೂ ಲಭ್ಯವಿದ್ದರೂ ಈ ಯೋಜನೆಯ ಬಗ್ಗೆ ರೈತರು ನಿರ್ಲಕ್ಷ್ಯ ವಹಿಸಿದ್ದಾರೆ. 2025ರ ಜನೇವರಿ ಅಂತ್ಯಕ್ಕೆ ಯೋಜನಾ ಅವಧಿ ಪೂರ್ಣಗೊಳ್ಳಲಿದ್ದು ಇದುವರೆಗೂ ಕೇವಲ 200 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ.

ಕೊಳವೆ ಬಾವಿ, ಕೃಷಿ ಹೊಂಡ ಹೊಂದಿರುವ ರೈತರಿಗೆ ಮಾತ್ರ ಯೋಜನೆಯನ್ನು ವಿಶೇಷ ಕಾಳಜಿ ವಹಿಸಿ ಹಳ್ಳದ ಪಕ್ಕದ ರೈತರಿಗೂ ಲಭ್ಯವಾಗುವಂತೆ ವಿಸ್ತರಿಸಲಾಗಿದೆ. ಅರ್ಹ ರೈತರು ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬೇಕು. ಕನಿಷ್ಠ ಒಂದು ಬೆಳೆಯನ್ನಾದರೂ ಬೆಳೆಯಲು ರೈತರಿಗೆ ಇದು ವರದಾನವಾಗಲಿದೆ ಎಂದು ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ.ಜಿ.ಎಸ್. ತಿಳಿಸಿದ್ದಾರೆ.ಈ ಯೋಜನೆಯನ್ನು ಹಳ್ಳದ ಅಕ್ಕಪಕ್ಕದಲ್ಲಿ ಜಮೀನು ಹೊಂದಿರುವ ರೈತರಿಗೂ ವಿಸ್ತರಿಸಿರುವುದು ಅದರಲ್ಲಿಯೂ ರಾಜ್ಯದಲ್ಲಿಯೇ ಮೊದಲ ಬಾರಿಗೆ ಗದಗ ತಾಲೂಕಿನಲ್ಲಿ ಅನುಷ್ಠಾನ ಮಾಡಿರುವುದು ಸಂತಸದ ಸಂಗತಿ. ಈ ಕುರಿತು ವಿಸ್ತೃತವಾಗಿ ಚರ್ಚಿಸಲು ಡಿ. 29 ರಂದು ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಹೆಚ್ಚಿನ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

Share this article