ಅಟಲ್ ಬಿಹಾರಿ ವಾಜಪೇಯಿ ಭಾರತದ ಪರಿವರ್ತನ ಶಿಲ್ಪಿ: ಡಾ.ಸಿದ್ದರಾಮಯ್ಯ

KannadaprabhaNewsNetwork | Published : Dec 26, 2024 1:03 AM

ಸಾರಾಂಶ

ಅಟಲ್ ವಿಶ್ವಕ್ಕೆ ಭಾರತದ ಶಕ್ತಿ ತೋರಿಸಿದ ಧೀಮಂತ ಆಡಳಿತಗಾರರಾಗಿದ್ದರು. ಪರಮಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ತಮ್ಮ ಸರ್ಕಾರದ ನಿರ್ಧಾರ ಮತ್ತು ನಂತರದ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಮ್ಮ ನಾಯಕತ್ವದ ಮೂಲಕ ತೋರಿಸಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 21ನೇ ಶತಮಾನದ ಭಾರತದ ಪರಿವರ್ತನೆಯ ಶಿಲ್ಪಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾರತೀ ಜನತಾ ಪಕ್ಷ ಜಿಲ್ಲಾ ಸಮಿತಿ ಆಯೋಜಿಸಿದ್ದ ಅಟಲ್ ಜನ್ಮ ಶತಾಬ್ದಿ ಸಮಾರಂಭ ಮತ್ತು ಸುಶಾಸನ ದಿವಸ್ ಆಚರಣೆಗೆ ಚಾಲನೆ ನೀಡಿ ಮಾತನಾಡಿ, ಅಟಲ್ ವಿಶ್ವಕ್ಕೆ ಭಾರತದ ಶಕ್ತಿ ತೋರಿಸಿದ ಧೀಮಂತ ಆಡಳಿತಗಾರರಾಗಿದ್ದರು. ಪರಮಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ತಮ್ಮ ಸರ್ಕಾರದ ನಿರ್ಧಾರ ಮತ್ತು ನಂತರದ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಮ್ಮ ನಾಯಕತ್ವದ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ನಮ್ಮ ನಿಮ್ಮೆಲ್ಲರ ಮುಂದಿರುವ ಜೀವಂತ ಉದಾಹರಣೆಯಾಗಿದೆ ಎಂದು ಸ್ಮರಿಸಿದರು.ಬಿಜೆಪಿ ಕಾರ್ಯದರ್ಶಿ ವಿವೇಕ್ ಮಾತನಾಡಿ, ಅಂದು ಪ್ರಧಾನಿಯಾಗಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ನಾಗರಿಕರಿಗೆ ತಂತ್ರಜ್ಞಾನ ಪ್ರವೇಶಿಸಲು ಮೊದಲ ಪ್ರಯತ್ನ ಮಾಡಿತು. ಅದೇ ಸಮಯದಲ್ಲಿ ಭಾರತವನ್ನು ಸಂಪರ್ಕಿಸುವಲ್ಲಿ ದೂರದೃಷ್ಟಿ ಇತ್ತು. ಇಂದಿಗೂ, ಹೆಚ್ಚಿನ ಜನರು ಭಾರತದ ಉದ್ದ ಮತ್ತು ಅಗಲವನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆಯನ್ನು ನೆನಪಿಸಿಕೊಳ್ಳುತ್ತಾರೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಕೆಂಪಬೋರಯ್ಯ ಮಾತನಾಡಿ, ಸರ್ವಶಿಕ್ಷಣ ಅಭಿಯಾನ ತಂದ ವಾಜಪೇಯಿ ಅವರು ಆಧುನಿಕ ಶಿಕ್ಷಣವನ್ನು ರಾಷ್ಟ್ರದಾದ್ಯಂತ ಜನರಿಗೆ ತಲುಪಿಸಲು ಶ್ರಮಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ ವಿಶ್ವ ಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರ.ಕಾರ್ಯದರ್ಶಿ ಆನಂದ್, ಓಬಿಸಿ ಘಟಕ ಜಿಲ್ಲಾಧ್ಯಕ್ಷ ನರಸಿಂಹಚಾರ್, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ಕೇಶವ್, ಪ್ರಸನ್ನ, ಚಂದ್ರ, ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ಆನಂದ್ ಇದ್ದರು.

Share this article