- ಸಮಗ್ರ ಕರವೇ ನೇತೃತ್ವದಲ್ಲಿ ಕನ್ನಡಹಬ್ಬ-ರಾಜ್ಯೋತ್ಸವ - - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಧಕ್ಕೆಯಾಗುತ್ತಿದೆ. ಆದ್ದರಿಂದ ಕನ್ನಡಪರ ಹೋರಾಟಗಾರರು ಗಡಿಭಾಗದಲ್ಲಿ ಹೋರಾಟ ನಡೆಸಲು ಮುಂದಾಗಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಶಿವಯೋಗಿ ಮಂದಿರ ಆವರಣದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ 3ನೇ ವರ್ಷದ ಕನ್ನಡಹಬ್ಬ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಅಚ್ಚ ಕನ್ನಡ ಮಾತನಾಡುವ ಜಿಲ್ಲೆ ದಾವಣಗೆರೆ ಮಾತ್ರ. ನಾವು ಯಾರ ಭಾಷೆಗೂ ದಾಸ್ಯರಾಗಿಲ್ಲ. ಹೊರ ದೇಶದಿಂದ ಬರುವ ಉದ್ಯಮಿಗಳು ತಮ್ಮ ಕಂಪನಿಗಳಲ್ಲಿ ಶೇ.80ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಕೊಡಬೇಕೆಂಬ ಷರತ್ತನ್ನು ಸರ್ಕಾರ ವಿಧಿಸಬೇಕು ಎಂದು ಒತ್ತಾಯಿಸಿದರು.
ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಎಲ್ಲರೂ ಕನ್ನಡದಲ್ಲಿಯೇ ವ್ಯವಹರಿಸಬೇಕು. ಕನ್ನಡದಲ್ಲಿಯೇ ಸಹಿ ಮಾಡಬೇಕು. ಪತ್ರ ವ್ಯವಹಾರ ಕನ್ನಡದಲ್ಲಿಯೇ ಇರಬೇಕು. ಕನ್ನಡದಲ್ಲಿ ಓದಿದವರಿಗೆ ಉದ್ಯೋಗಕ್ಕೆ ಒತ್ತು ಕೊಡಬೇಕು. ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ, ಇಂಗ್ಲಿಷ್‌ನಿಂದಲೇ ಬದುಕು ಉದ್ಧಾರ ಎಂಬ ಭ್ರಮೆ ಹಲವರಲ್ಲಿದೆ. ಆ ಭ್ರಮೆಯಿಂದ ಹೊರಬರಬೇಕಿದೆ ಎಂದರು.ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ, ಗೌರವಧನ ನೀಡಿ ಸನ್ಮಾನಿಸಲಾಯಿತು. ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.
ಪಾಲಿಕೆ ಮಹಾಪೌರರಾದ ಕೆ.ಚಮನ್ ಸಾಬ್, ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಶಿವಗಂಗಾ ಶ್ರೀನಿವಾಸ್, ಆಲೂರು ಲಿಂಗರಾಜ್, ಶಾಮನೂರು ಕಣ್ಣಾಳ್ ಅಂಜಿನಪ್ಪ, ಕೆ.ಎಚ್. ರವೀಂದ್ರ ಬಾಬು, ರಘುನಾಥ್, ಸಂತೋಷ, ಲೋಕಿಕೆರೆ ನಾಗರಾಜ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ್, ಆನೆಕೊಂಡ ರಾಜು, ಎನ್.ಎಸ್.ಈರಣ್ಣ, ಜೆ. ಜಗದೀಶ್, ರಾಘವೇಂದ್ರ, ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು. ಕನ್ನಡ ಪ್ರಾಧ್ಯಾಪಕ ಅಯೂಬ್ ಖಾನ್ ನಿರೂಪಿಸಿದರು.- - - -24ಕೆಡಿವಿಜಿ34:
ದಾವಣಗೆರೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆದ ಕನ್ನಡ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.