ಅಟಲ್‌ಜೀ ಕಾರ್ಯವೈಖರಿ ನಮಗೆ ಸ್ಫೂರ್ತಿ, ಪ್ರೇರಣೆ: ವಿಜಯೇಂದ್ರ

KannadaprabhaNewsNetwork |  
Published : Nov 20, 2025, 01:30 AM IST
ವಾಜಪೇಯಿ ಜನ್ಮ ಶತಾಬ್ದಿ: ಪುತ್ತೂರಲ್ಲಿ ಅಟಲ್ ವಿರಾಸತ್ ಸಮಾವೇಶ | Kannada Prabha

ಸಾರಾಂಶ

ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿನ ಮೈದಾನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ‘ಅಟಲ್ ವಿರಾಸತ್’ ಆಯೋಜಿಸಲಾಯಿತು.

ವಾಜಪೇಯಿ ಜನ್ಮ ಶತಾಬ್ದಿ: ಪುತ್ತೂರಲ್ಲಿ ಅಟಲ್ ವಿರಾಸತ್ ಸಮಾವೇಶಕನ್ನಡಪ್ರಭ ವಾರ್ತೆ ಪುತ್ತೂರು

ಅಲಟ್ ಬಿಹಾರಿ ವಾಜಪೇಯಿ ಅವರು ಮಾಜಿ ಪ್ರಧಾನಿಯಾಗಿ, ಕವಿ ಹೃದಯಿಯಾಗಿ, ಬರಹಗಾರರಾಗಿ, ಅಪ್ಪಟ ದೇಶಭಕ್ತರಾಗಿ, ಅಜಾತಶತ್ರುವಾಗಿ ನಮಗೆಲ್ಲ ಪ್ರೇರಣೆಯಾಗಿದ್ದಾರೆ. ಅವರು ಕಟ್ಟಿದ ಪಕ್ಷದಲ್ಲಿ ಕಾರ್ಯಕರ್ತರಾಗಿರುವುದು ಹೆಮ್ಮೆ ಮತ್ತು ಸ್ಫೂರ್ತಿ. ಕರ್ನಾಟಕ ಬಿಜೆಪಿಯ ಹೆಬ್ಬಾಗಿಲು ಆಗುತ್ತದೆ ಎಂಬ ಕನಸು ವಾಜಪೇಯಿ ಅವರದ್ದಾಗಿತ್ತು. ಅದನ್ನು ಮತ್ತೊಮ್ಮೆ ನೆನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಅವರು ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿನ ಮೈದಾನದಲ್ಲಿ ಬುಧವಾರ ಆಯೋಜಿಸಲಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ‘ಅಟಲ್ ವಿರಾಸತ್’ ಉದ್ಘಾಟಿಸಿ ಮಾತನಾಡಿದರು.ಇಡೀ ರಾಜ್ಯಕ್ಕೆ ಸಂಘಟನೆಯ ಶಕ್ತಿ ಕೊಟ್ಟಿರುವ ಕರಾವಳಿಗೆ ಬರುವುದೆಂದರೆ ನಮಗೆ ಹೆಮ್ಮೆಯಾಗುತ್ತದೆ. ಇಲ್ಲಿನ ಕಾರ್ಯಕರ್ತರ ಮುತುವರ್ಜಿ ನೋಡುವಾಗ ಪ್ರೇರಣೆಯಾಗುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕರಾವಳಿಗೆ ಬರುವುದೆಂದರೆ ಹೆಮ್ಮೆ ಪಡುತ್ತಿದ್ದರು. ಅಟಲ್ ವಿರಾಸತ್ ಎನ್ನುವುದು ಒಂದು ಭಾವನಾತ್ಮಕ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮಕ್ಕೆ ಮೊದಲು ಮಹಾಲಿಂಗೇಶ್ವರ ದೇವಸ್ಥಾನ ಭೇಟಿ ವೇಳೆ ೧೦೩ ವರ್ಷದ ವೃದ್ಧೆ ತಾಯಿಯೊಬ್ಬರು ರಾಜ್ಯದಲ್ಲಿ ಬಿಜೆಪಿ ಕಟ್ಟುವ ಕೆಲಸ ಮಾಡು ಎಂದು ಆಶೀರ್ವಾದ ಮಾಡಿದರು. ಇದರಿಂದಾಗಿ ನನಗೆ ರೋಮಾಂಚನವಾಯಿತು. ಪುತ್ತೂರಿನ ಮಣ್ಣಿನ ಕಣಕಣದಲ್ಲೂ ದೇಶ ಮತ್ತು ಸಂಘಟನೆ ಬಗ್ಗೆ ಶ್ರದ್ಧೆಯಿದೆ ಎಂದು ಹೇಳಿದರು. ಕಾರ್ಯಕರ್ತರಿಗೆ ಹೇಗೆ ಗೌರವ ಕೊಡಬೇಕು ಎಂಬುವುದನ್ನು ನಾವೆಲ್ಲರೂ ಅಟಲ್ ಜೀಯಿಂದ ಕಲಿಯಬೇಕಾಗಿದೆ. ಅವರು ನಾಯಕರು ಮತ್ತು ಕಾರ್ಯಕರ್ತರನ್ನು ಸಮಾನವಾಗಿ ಗೌರವಿಸುತ್ತಿದ್ದರು. ರಾಜ್ಯದ ಎಲ್ಲ ಕಾರ್ಯಕರ್ತರು ಬಿಜೆಪಿ ಅಧಿಕಾರಕ್ಕೆ ಬರಲು ಪರಿತಪಿಸುತ್ತಿದ್ದಾರೆ. ಪಕ್ಷದಲ್ಲಿರೋ ಲಕ್ಷಾಂತರ ಕಾರ್ಯಕರ್ತರು ತನುಮನಧನ ಅರ್ಪಿಸಿ ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಪಡೆಯಬೇಕಾದರೆ ಕಾರ್ಯಕರ್ತರು ವ್ಯತ್ಯಾಸ ಮರೆತು, ಪಕ್ಷದ ಮುಖಂಡರು ವೈಮನಸ್ಸು ಮರೆತು ಪ್ರಯತ್ನಿಸಬೇಕು ಎಂದರು.

ಬಡವರು, ಹಿಂದೂ ವಿರೋಧಿ ಸರ್ಕಾರ:

ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ರೈತರು ಮತ್ತು ಬಡವರ ಮೇಲೆ ಅಟ್ಟಹಾಸ ಮೆರೆಯುತ್ತಿದೆ. ಹಿಂದೂ ವಿರೋಧಿ ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂಬ ಸಂಕಲ್ಪವನ್ನು ನಾವು ತೊಡಬೇಕಾಗಿದೆ. ಪಕ್ಷವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅವರನ್ನು ಗೆಲ್ಲಿಸುವ ಕಾರ್ಯಕರ್ತರು ಇಲ್ಲಿದ್ದು, ದ.ಕ. ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಇಡೀ ರಾಜ್ಯಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ: ಪ್ರತಿಜ್ಞೆ

ಪಕ್ಷ ಸಂಘಟನೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಕಳೆದ ಒಂದು ವಾರದಿಂದ ಪಕ್ಷದ ಹಿರಿಯ ನಾಯಕರನ್ನ ನಾನು ಭೇಟಿ ಮಾಡುತ್ತಿದ್ದೇನೆ. ಪಕ್ಷವು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ತರುವುದು ನನ್ನ ಪ್ರತಿಜ್ಞೆಯಾಗಿದೆ. ದರಿದ್ರ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎರಡೂವರೆ ವರ್ಷದಲ್ಲಿ ಕಿತ್ತೊಗೆಯದೆ ನಾವು ವಿಶ್ರಾಂತಿ ಪಡೆಯುವಂತಿಲ್ಲ. ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಗಾಗಿ ಒಂದು ರೂಪಾಯಿ ಖರ್ಚು ಮಾಡಿಲ್ಲ. ಜನಸಾಮಾನ್ಯರಿಗೆ ಈ ಸರ್ಕಾರ ಬದುಕಿದ್ದೂ ಸತ್ತಂತಿದೆ. ಮುಂದಿನ ಎರೂಡವರೆ ವರ್ಷಗಳಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ೧೨ ವರ್ಷಗಳಲ್ಲಿ ದೇಶವನ್ನು ಬಲಿಷ್ಠಗೊಳಿಸುತ್ತಾ ಪ್ರಗತಿ ಹಂತಕ್ಕೆ ಕೊಂಡೊಯ್ದಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಯ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದೆ. ಇದರಿಂದಾಗಿ ರಾಹುಲ್ ಗಾಂಧಿ ಜೀವನದಲ್ಲಿ ಜಿಗುಪ್ಸೆಗೊಂಡು ರಾಜಕೀಯ ನಿವೃತ್ತಿಗೆ ತೀರ್ಮಾನಿಸಿದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಯಕರ್ತರಿಗೆ ತಲುಪಲಾಗದ ಜಾಗದಲ್ಲಿ ತನ್ನನ್ನು ಕೂರಿಸಬೇಡ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಪ್ರಸ್ತುತ ಪುತ್ತೂರಿಗೆ ಅವರ ಈ ಮಾತು ಅತ್ಯಂತ ಅಗತ್ಯದ ಸಂದೇಶವಾಗಿದೆ. ರಾಜಕಾರಣದ ಎಲ್ಲ ಪ್ರಶ್ನೆಗಳಿಗೆ ಅಟಲ್‌ಜೀ ಅವರ ರಾಜಕೀಯ ಜೀವನ ಉತ್ತರವಾಗಿದೆ. ಅವರ ಧ್ಯೇಯವಾಕ್ಯದ ರಾಜಕೀಯ ನಾವು ಮಾಡಬೇಕಾಗಿದೆ ಎಂದರು. ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದರು. ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೊಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಎಸ್. ಅಂಗಾರ, ಮಾಜಿ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಸಂಜೀವ ಮಠಂದೂರು, ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಆರ್. ಸಿ. ನಾರಾಯಣ, ಗೋಪಾಲಕೃಷ್ಣ ಹೇರಳೆ, ಯತೀಶ್ ಆರ್ವರ್, ಪ್ರಸನ್ನ ಮಾರ್ತ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಸಂಚಾಲಕ ಕಿಶೋರ್ ಕುಮಾರ್ ಬೊಟ್ಯಾಡಿ ಪ್ರಸ್ತಾವನೆಗೈದರು. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಂದಿಸಿದರು. ಸುನಿಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ಬನ್ನೂರು, ಚಂದ್ರಶೇಖರ ಬಪ್ಪಳಿಗೆ ಸಹಕಾರಿಸಿದರು.

PREV

Recommended Stories

ಡಿ. 4 ರಂದು ಕೊಡಗಿನ ಹುತ್ತರಿ ಹಬ್ಬ
ಬಿಹಾರದಲ್ಲಿ ಕಪಾಳಮೋಕ್ಷ, ರಾಹುಲ್ ಗಾಂಧಿ ಕಾಣೆ: ಬಿ.ವೈ.ವಿಜಯೇಂದ್ರ