ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಮೂರು ವರ್ಷಗಳ ನಂತರ ಹಿನ್ನೀರಿನಲ್ಲಿ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಗೋಚರಗೊಂಡಿದೆ. ಈ ವಿಚಾರ ತಿಳಿದು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಪ್ರವಾಸಿಗರು ಕೆಆರ್‌ಎಸ್ ಹಿನ್ನೀರಿಗೆ ಆಗಮಿಸಿ ಐತಿಹಾಸಿಕ ದೇವಾಲಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.
ಎಲ್.ವಿ.ನವೀನ್ ಕುಮಾರ್
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಮೂರು ವರ್ಷಗಳ ನಂತರ ಹಿನ್ನೀರಿನಲ್ಲಿ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಗೋಚರಗೊಂಡಿದೆ. ಈ ವಿಚಾರ ತಿಳಿದು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಪ್ರವಾಸಿಗರು ಕೆಆರ್‌ಎಸ್ ಹಿನ್ನೀರಿಗೆ ಆಗಮಿಸಿ ಐತಿಹಾಸಿಕ ದೇವಾಲಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.
ಇತ್ತ ಮುಂಗಾರು ಪ್ರಾರಂಭವಾದರೂ ನಿರೀಕ್ಷೆಯಂತೆ ಮಳೆಯಾಗದ ಕಾರಣ ಅಣೆಕಟ್ಟೆಯಲ್ಲಿ ದಿನೇ ದಿನ ನೀರಿನ ಸಂಗ್ರಹ ಗಣನೀಯವಾಗಿ ಕುಸಿಯುತ್ತಿದ್ದು, ರೈತರು ತಾವು ಬೆಳೆದಿರುವ ಬೆಳೆಗಳನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ.
ಪ್ರವಾಸಿಗರ ಆಕರ್ಷಣೆ ದೇಗುಲ:
ಕೆಆರ್‌ಎಸ್ ಹಿನ್ನೀರಿನಲ್ಲಿ ಗೋಚರಗೊಂಡಿರುವ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಇದೀಗ ಪ್ರವಾಸಿಗ ಆಕರ್ಷಣೀಯ ಕೇಂದ್ರ ಬಿಂದುವಾಗಿ ರೂಪುಗೊಂಡಿದೆ. ಪ್ರತಿದಿನ ಸಹಸ್ರಾರು ಮಂದಿ ದೇವಾಲಯ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅಲ್ಲದೇ, ಪ್ರಿ-ವೆಡ್ಡಿಂಗ್ ಫೋಟೋಶೂಟ್, ಭರತನಾಟ್ಯ ಚಿತ್ರೀಕರಣ, ಕಿರುಚಿತ್ರ ಹಾಗೂ ಸಾಮಾಜಿಕ ಜಾಲತಾಣಗಳ ವೀಡಿಯೋ ನಿರ್ಮಾಣಗಳಿಗೂ ಈ ಪ್ರದೇಶ ನೆಚ್ಚಿನ ತಾಣವಾಗಿ ಮಾರ್ಣಟ್ಟಿದೆ. ದೇವಾಲಯದ ಹಿನ್ನೆಲೆ ಹಾಗೂ ವಿಶಾಲ ಜಲಾಶಯದ ದೃಶ್ಯಗಳು ಛಾಯಾಗ್ರಾಹಕರನ್ನು ಸೆಳೆಯುತ್ತಿದೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಕೆಆರ್‌ಎಸ್ ಹಿನ್ನೀರಿನಲ್ಲಿ ಮತ್ತಷ್ಟು ಹೆಚ್ಚಾಗುತ್ತಿದ್ದಾರೆ.
ತ್ಯಾಜ್ಯ ವಸ್ತುಗಳಿಂದ ಅನೈರ್ಮಲ್ಯ ತಾಂಡವ:
ದೇವಾಲಯ ವೀಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಪ್ರವಾಸಿಗರು ತಾವು ತಂದಿರುವ ಪ್ಲಾಸ್ಟಿಕ್ ಬಾಟಲ್, ಆಹಾರ ತಿನಿಸುಗಳು ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳನ್ನು ಎಲ್ಲಂದರಲ್ಲಿ ಬಿಸಾಡು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಲ್ಲದೇ, ಮದ್ಯ ಪ್ರಿಯರು ಸಹ ಖಾಲಿ ಬಾಟಲಿಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಎಲ್ಲೆದರಲ್ಲಿ ಬಿಸಾಡಿ ಕಾವೇರಿ ನೀರು ಹಾಗೂ ಪರಿಸರ ಮತ್ತಷ್ಟು ಹಾಳು ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದು ಬಂದು ನೀರಿನ ಸಂಗ್ರಹ ಹೆಚ್ಚಾದರೆ ಪ್ರವಾಸಿಗರು ಬಿಸಾಡಿರುವ ಪ್ಲಾಸ್ಟಿಕ್ ವಸ್ತುಗಳೆಲ್ಲ ಮತ್ತೆ ಕಾವೇರಿ ನೀರಿಗೆ ಸೇರ್ಪಡೆಯಾಗಿ ಕಲುಷಿತಗೊಳ್ಳಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್‌ಎಸ್ ಹಿನ್ನೀರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಪ್ರವಾಸಿಗರ ಸುರಕ್ಷತೆ, ನೈರ್ಮಲ್ಯ ಕಾಪಾಡುವುದು, ಐತಿಹಾಸಿಕ ತಾಣದ ರಕ್ಷಣೆಗಾಗಿ ಪೊಲೀಸ್ ಗಸ್ತು, ಎಚ್ಚರಿಕೆ ಫಲಕಗಳು ಹಾಗೂ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕಲ್ಪಿಸಲು ತಾಲೂಕು ಹಾಗೂ ಜಿಲ್ಲಾಡಳಿತ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೈಕೊಟ್ಟ ಮುಂಗಾರು, ರೈತರಲ್ಲಿ ಆತಂಕ:
ಕೆಆರ್‌ಎಸ್ ಹಿನ್ನೀರಿನಲ್ಲಿ ದೇಗುಲ ಗೋಚರಗೊಂಡು ಪ್ರವಾಸಿಗರಿಗೆ ಸಂಭ್ರಮ ತಂದರೆ, ಇತ್ತ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದೆ ಬೇಸಿಗೆ ಬಿಸಿಲಿಗೆ ಕೆಆರ್‌ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ಮುಂಗಾರು ಮಳೆಗಾಗಿ ರೈತರ ಮೊಗದಲ್ಲಿ ಆಶಾ ಭಾವನೆ ಕಂಡು ಬಂದರೂ ಜೂನ್ ಎರಡನೇ ವಾರ ಕಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದೆ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ರೈತರಲ್ಲಿ ಆತಂಕ ಹೆಚ್ಚು ಮಾಡಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತರ ಕೃಷಿ ಚಟುವಟಿಕೆ ಜೊತೆಗೆ ಕುಡಿಯುವ ನೀರಿಗೆ ತೊಂದರೆಯಾಗುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.ಅಣೆಕಟ್ಟೆಯಲ್ಲಿ 81.35 ಅಡಿ ನೀರು ಸಂಗ್ರಹ
124.80 ಗರಿಷ್ಠ ಮಟ್ಟದ ಕೆಆರ್ ಎಸ್ ಜಲಾಶಯದಲ್ಲಿ ಜೂ.16ರ ಬೆಳಗ್ಗೆ 8 ಗಂಟೆ ವೇಳೆಗೆ 81.35 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಲ್ಲಿ ಕೇವಲ 11.394 ಟಿಎಂಸಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ 581 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿ, ಕಾಲುವೆಗಳು ಹಾಗೂ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಒಟ್ಟು 436 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಅಣೆಕಟ್ಟೆಯನ್ನು ರೈತರ ವ್ಯವಸಾಯಕ್ಕಾಗಿ ನಿರ್ಮಿಸಲಾಗಿದೆ. ಆದರೆ, ಪ್ರಸ್ತುತ ರಾಜಕಾರಣಿಗಳು ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸದೇ ಕೇವಲ ಹಣ ಮಾಡುವ ಉದ್ದೇಶದಿಂದ ಅಣೆಕಟ್ಟೆ ಡೆಡ್ ಸ್ಟೋರೆಜ್ ನೀರನ್ನು ಬೆಂಗಳೂರು- ಮೈಸೂರಿನಂತ ನಗರಗಳಿಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಅಣೆಕಟ್ಟೆ ಸಂಪೂರ್ಣ ಖಾಲಿಯಾದರೆ ಬಿರುಕು ಬಿಡುವ ಸಾಧ್ಯತೆ ಇದೆ. ಅಣೆಕಟ್ಟೆಯಲ್ಲಿನ ಕನಿಷ್ಠ 60 ರಿಂದ 70 ಅಡಿ ನೀರು ಹೊರ ಹೋಗದಂತೆ ನಿರ್ಮಾಣ ಮಾಡಲಾಗಿದೆ. ಆದರೆ, ಇದೀಗ ನೂರಾರು ಅಡಿ ಗುಂಡಿ ತೋಡಿ ನೀರನ್ನು ಹೊರ ತೆಗೆದು ಅಣೆಕಟ್ಟೆಗೆ ಅಪಯಾವನ್ನುಂಟು ಮಾಡುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.