ಭೂ ಒತ್ತುವರಿ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ!

KannadaprabhaNewsNetwork |  
Published : Mar 01, 2024, 02:23 AM IST
ಸಸಸ | Kannada Prabha

ಸಾರಾಂಶ

ಭೂ ಒತ್ತುವರಿ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಪ್ರಕರಣ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಭೂ ಒತ್ತುವರಿ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಪ್ರಕರಣ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬುಧವಾರ ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ಸರ್ವೆ ನಂ-237/A ಆಸ್ತಿಯ ಜಮೀನಿನಲ್ಲಿ ಹಾಯ್ದು ಹೋಗುವ ಸರ್ಕಾರಿ ರಸ್ತೆಯ ಅತಿಕ್ರಮಣ ಮಾಡಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಈ ಘಟನೆ 2023ರ ಜುಲೈನಲ್ಲಿ ನಡೆದಿರುವುದು ಎಂದು ಹೇಳಲಾಗುತ್ತಿದೆ.

ಸುಮಾರು ನಾಲ್ಕಾರು ವರ್ಷಗಳ ಹಿಂದಿನಿಂದಲೂ ಬಂದಿರುವ ಭೂ ಒತ್ತುವರಿ ವಿವಾದದ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ನ್ಯಾಯ ದೊರಕಿಸುವಂತೆ ಮಹಿಳೆ ಕೇಳಿಕೊಂಡರೂ ರಾಜಕೀಯ ಒತ್ತಡದಿಂದ ನ್ಯಾಯ ದೊರೆಯಲಿಲ್ಲ. ಈ ಕಾರಣದಿಂದ ನನ್ನ ತಾಯಿ ಹಾಗೂ ಅಣ್ಣ ತಮ್ಮಂದಿರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದರೂ ನಮಗೆ ಯಾರೂ ಸ್ಪಂದಿಸಲಿಲ್ಲ. ಇದರಿಂದ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಬಂದು ನನ್ನ ಅಳಲನ್ನು ತೋಡಿಕೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ನೊಂದ ಮಹಿಳೆ ಹೇಳಿದ್ದಾಳೆ.

ನೊಂದ ಮಹಿಳೆಯ ಸಮಸ್ಯೆಯನ್ನು ಹೋಗಲಾಡಿಸಲು ತಹಸೀಲ್ದಾರ್‌ ಎಸ್.ಬಿ.ಇಂಗಳಿ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಸಿಡಿಪಿಒ ಸಂಜಯಕುಮರ ಸದಲಗೆ ಸ್ಥಳಕ್ಕೆ ಬಂದು ರಸ್ತೆ ಪರಿಶೀಲನೆ ಮಾಡಿದರು. ಒತ್ತುವರಿ ಮಾಡಿದ ಸ್ಥಳವನ್ನು ಭೂಮಾಪನ ಇಲಾಖೆಯಿಂದ ಸರ್ವೆ ಕಾರ್ಯ ಪ್ರಾರಂಭಿಸಿದರು.

ಬೆಳಗಾವಿ ಹೆಚ್ಚುವರಿ ಪೊಲೀಸ್ ಆಯುಕ್ತೆ ಶ್ರುತಿ ಎನ್.ಎಸ್.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಧ್ಯಾಹ್ನದಿಂದ ಸಂಜೆಯವರೆಗೆ ಹಿರಿಯ ಅಧಿಕಾರಿಗಳು ನೊಂದ ಮಹಿಳೆ, ತಾಯಿ, ಸಹೋದರರನ್ನು ಕಾಗವಾಡ ಪೊಲೀಸ್ ಠಾಣೆಗೆ ಕರೆದುಕೊಂಡು ಅವರ ಅಭಿಪ್ರಾಯ ಪಡೆದುಕೊಂಡರು. ನೊಂದ ಮಹಿಳೆ ಮಾತನಾಡಿ, ನನ್ನ ಜಮೀನಿನ ಒತ್ತುವರಿ ಸರಿಪಡಿಸಿ ನನಗೆ ವಾಪಸ್ ನೀಡುವವರೆಗೆ ನನ್ನ ಹೋರಾಟ ಇದೇ ರೀತಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

------

ಬಾಕ್ಸ್.....

ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಭೂ ಒತ್ತುವರಿ ಸರಿಪಡಿಸಲು ಭೂಮಾಪನ ಇಲಾಖೆ ಸಿಬ್ಬಂದಿಯನ್ನು ಕರೆದುಕೊಂಡು ಸರ್ವೆ ಕಾರ್ಯಕ್ಕೆ ನೇಮಕಾತಿ ಮಾಡಲಾಗಿದೆ. ನೊಂದ ಯುವತಿ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು.

-ಎಸ್.ಬಿ.ಇಂಗಳಿ, ಕಾಗವಾಡ ತಹಸೀಲ್ದಾರ್‌

----------

ಐನಾಪುರದಲ್ಲಿ ಜರುಗಿದ ಈ ಘಟನೆ ಬಗ್ಗೆ ಮಾಹಿತಿ ಪಡೆದು ತಪ್ಪಿಸ್ಥರ ಮೇಲೆ ಸೂಕ್ತಕ್ರಮ ಜರುಗಿಸಲು ಹಿರಿಯ ಪೊಲೀಸ್ ಅಧಿಕಾರಿ ಹಾಗೂ ತಹಸೀಲ್ದಾರ್‌ ಅವರಿಗೆ ಮಾಹಿತಿ ನೀಡಿದ್ದೇನೆ. ನೊಂದ ಕುಟುಂಬಕ್ಕೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕಾರ್ಯ ಮಾಡುತ್ತೇನೆ.

-ಭರಮಗೌಡ (ರಾಜು) ಕಾಗೆ, ಶಾಸಕರು ಕಾಗವಾಡ ಮತಕ್ಷೇತ್ರ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ