ಮಹಿಳಾ ದೌರ್ಜನ್ಯ ಅಪರಾಧಿಗಳ ವಿರುದ್ಧ ಕಠಿಣ ಕ್ರಮ: ಗೀತಾ ವಾಗ್ಳೆ ಆಗ್ರಹ

KannadaprabhaNewsNetwork |  
Published : Mar 20, 2025, 01:15 AM IST
ಗೀತಾ | Kannada Prabha

ಸಾರಾಂಶ

ಮರಕ್ಕೆ ಕಟ್ಟಿ ಹಾಕಿ ದಲಿತ ಮಹಿಳೆಯೊಬ್ಬಳ ಮೇಲೆ ದೌರ್ಜನ್ಯವೆಸಗಿದ ಘಟನೆಯ ಕುರಿತು ಇಡೀ ಉಡುಪಿ ಜಿಲ್ಲೆಯ ಜನತೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಶಾಂತಿ, ಪ್ರೀತಿ, ಸನ್ನಾಗರೀಕತೆಗೆ ಹೆಸರಾಗಿರುವ ಉಡುಪಿಯಲ್ಲಿ ಈ ರೀತಿಯ ಅನಾಗರಿಕ ಘಟನೆ ನಡೆದಿದೆ ಎಂದರೆ ನಂಬಲೂ ಕಷ್ಟವಾಗಿದೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಲ್ಪೆ ಬಂದರು ಪರಿಸರದಲ್ಲಿ ಮೀನು ಕದ್ದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಮರಕ್ಕೆ ಕಟ್ಟಿ ಹಾಕಿ ದಲಿತ ಮಹಿಳೆಯೊಬ್ಬಳ ಮೇಲೆ ದೌರ್ಜನ್ಯವೆಸಗಿದ ಘಟನೆಯ ಕುರಿತು ಇಡೀ ಉಡುಪಿ ಜಿಲ್ಲೆಯ ಜನತೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಶಾಂತಿ, ಪ್ರೀತಿ, ಸನ್ನಾಗರೀಕತೆಗೆ ಹೆಸರಾಗಿರುವ ಉಡುಪಿಯಲ್ಲಿ ಈ ರೀತಿಯ ಅನಾಗರಿಕ ಘಟನೆ ನಡೆದಿದೆ ಎಂದರೆ ನಂಬಲೂ ಕಷ್ಟವಾಗಿದೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಹಿಂದಿನ ಕಾಲದಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುತ್ತಿದ್ದ ಇಂತಹ ಘಟನೆಗಳನ್ನು ಪತ್ರಿಕೆಗಳ ಮೂಲಕ ತಿಳಿದಾಗ ಆಶ್ಚರ್ಯದಿಂದ ಹುಬ್ಬೇರಿಸುವಂತೆ ಆಗುತ್ತಿತ್ತು. ಆದರೆ ಇದೀಗ ನಮ್ಮದೇ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿರುವುದು ಉಡುಪಿಯ ಚರಿತ್ರೆಯಲ್ಲೊಂದು ಕಪ್ಪುಚುಕ್ಕೆ. ಇಂತಹ ಅಮಾನವೀಯ ಘಟನೆಗೆ ಕಾರಣರಾದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೇವಲ ಮೀನು ಕದ್ದರೆಂಬ ಕಾರಣಕ್ಕೆ ಆ ಮಹಿಳೆಯನ್ನು ಈ ರೀತಿ ಹಿಂಸಿಸಿರುವುದು ಖಂಡನೀಯ. ಇಂತಹ‌ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮುಂದಿನ ದಿನಗಳಲ್ಲಿ ಈ ಅವಮಾನ ತಡೆಯಲಾಗದೇ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆಯಿದೆ. ಎಲ್ಲರೊಂದಿಗೆ ಸಹಜವಾಗಿ ಬದುಕು ಸಾಗಿಸುವುದು ದುಸ್ತರವಾಗಲಿದೆ. ಇದಕ್ಕೆ ಕಾರಣರಾಗಿರುವ ಆ ದುಷ್ಕರ್ಮಿಗಳು ಇನ್ನು ಮುಂದೆ ಸಾರ್ವಜನಿಕವಾಗಿ ತಿರುಗುವಂತಾಗಬಾರದು. ಸಮಾಜಕ್ಕೆ ಇಂತಹ ದುಷ್ಟಶಕ್ತಿಗಳು ಎಂದಿಗೂ ಮಾರಕವೇ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಆದ್ದರಿಂದ ತಮ್ಮ ಈ ಘೋರ ಅಪರಾಧಕ್ಕೆ ಅಪರಾಧಿಗಳು ಜೈಲಿನ ಸಲಾಕೆಗಳ ಹಿಂದೆ ಇರುವಂತಾಗಬೇಕು. ಯಾವುದೇ ಕಾರಣಕ್ಕೂ, ಯಾವುದೇ ಪ್ರಭಾವಕ್ಕೂ, ಯಾವುದೇ ಪ್ರಲೋಭನೆಗೂ ಒಳಗಾಗದೇ ಕಾನೂನಿನ ಚೌಕಟ್ಟಿನೊಳಗೆ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವಂತಾಗಬೇಕು, ತನ್ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅದರಂತೆ ಈ ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಉಡುಪಿಯ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಲು ಸೂಚಿಸಿರುವುದು ಶ್ಲಾಘನೀಯ ಎಂದು ಗೀತಾ ವಾಗ್ಳೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ