ಕನ್ನಡಪ್ರಭ ವಾರ್ತೆ ಕನಕಪುರ
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳ ಹಿಂದೆ ನಗರದ ಮಳಗಾಳು ವಾರ್ಡ್ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಘಟನೆ ಅತ್ಯಂತ ಖಂಡನೀಯವಾಗಿದ್ದು, ಯಾರೋ ಪೋಕರಿಗಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡು ಆರೋಪಿಗಳನ್ನು ಈಗಾಗಲೇ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದರು.
ನಮ್ಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ದಲಿತರು ಸೇರಿ ಎಲ್ಲಾ ವರ್ಗದ ಜನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ, ಹಲ್ಲೆಗೊಳಗಾದ ಅನೀಶ್ ಎಂಬ ಯುವಕನ ತಂದೆ ವೈರಮುಡಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ರಾಮನಗರ ಜಿಲ್ಲಾ ಪಂಚಾಯಿತಿಯ ಪ್ರಥಮ ಅಧ್ಯಕ್ಷರನ್ನಾಗಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನದಿಂದ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ನೇಮಿಸಿದ್ದು, ಅವರಿಗೆ ಪರಿಶಿಷ್ಟ ವರ್ಗದ ಮೇಲೆ ಇರುವ ಅಪಾರ ಪ್ರೀತಿ, ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.ಕೆಲವು ಸ್ವಯಂ ಘೋಷಿತ ನಾಯಕರು ಪ್ರಚಾರಕ್ಕಾಗಿ ವಿನಾಕಾರಣ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಅವರ ಈ ಮನಸ್ಥಿತಿಗೆ ತಾಲೂಕಿನ ಪರಿಶಿಷ್ಟ ಸಮುದಾಯ ಸೊಪ್ಪು ಹಾಕುವುದಿಲ್ಲ, ಕ್ಷುಲ್ಲಕ ಆರೋಪಗಳನ್ನು ಮಾಡುವುದನ್ನು ಬಿಟ್ಟು ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಎಲ್ಲಾ ಜನಾಂಗದ ಮುಖಂಡರು, ರಾಜಕೀಯ ನಾಯಕರು ಮುಂದಾಗಬೇಕಾಗಿದೆ ಎಂದರು.
ಆರೋಪಿ ಹರ್ಷ ಕನಕಪುರ ನಗರದ ಮೇಗಳಬೀದಿ, ಬೆಂಗಳೂರು, ಪಕ್ಕದ ತಮಿಳುನಾಡು ರಾಜ್ಯದ ಡೆಂಕಣಿಕೋಟೆ ಗ್ರಾಮದಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ತುಮಕೂರು ವ್ಯಾಪ್ತಿ ಮೀರಿ ಬರದಂತೆ ಗಡಿಪಾರು ಮಾಡಲಾಗಿತ್ತು.ಈಗಾಗಲೇ ಡಿಕೆಶಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಅನೀಶ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹಾಗೂ ಧೈರ್ಯ ಹೇಳಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಳಗಾಳು ನಗರಸಭಾ ಸದಸ್ಯ ಕಾಂತರಾಜು, ಪರಿಶಿಷ್ಟ ವರ್ಗದ ತಾಲೂಕು ಅಧ್ಯಕ್ಷ ಮಾರುತಿ, ಅನೀಶ್ ಕುಟುಂಬಸ್ಥರಾದ ಚಲುವರಾಜು, ಗೋವಿಂದರಾಜು ಇದ್ದರು.