ತೋಟದ ಬೆಳೆಗಾರರ ಮೇಲೆ ಗದಾ ಪ್ರಹಾರ ಬೇಡ

KannadaprabhaNewsNetwork | Published : Jul 26, 2024 1:33 AM

ಸಾರಾಂಶ

ನಾಲೆಗಳಿಂದ ಅನಧಿಕೃತವಾಗಿ ತಮ್ಮ ತೋಟಗಳಿಗೆ ನೀರು ಹರಿಸಿಕೊಳ್ಳುವ ಮೂಲಕ ನೂರಾರು ವರ್ಷ, ದಶಕಗಳಿಂದಲೂ ರೈತರು ತೋಟ ಉಳಿಸಿಕೊಂಡು, ಬೆಳೆ ಕಾಪಾಡಿಕೊಂಡು ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ನೀರಾವರಿ ಅಧಿನಿಯಮ-1965ರ ಕಾನೂನು ತಿದ್ದುಪಡಿ ಮಾಡುವ ಮೂಲಕ ತೋಟದ ಬೆಳೆಗಾರ ರೈತರ ಮೇಲೆ ಗದಾ ಪ್ರಹಾರ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲೆಗಳಿಂದ ಅನಧಿಕೃತವಾಗಿ ತಮ್ಮ ತೋಟಗಳಿಗೆ ನೀರು ಹರಿಸಿಕೊಳ್ಳುವ ಮೂಲಕ ನೂರಾರು ವರ್ಷ, ದಶಕಗಳಿಂದಲೂ ರೈತರು ತೋಟ ಉಳಿಸಿಕೊಂಡು, ಬೆಳೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ರೈತರ ಮೇಲೆ ಕಾಯ್ದೆ ತಿದ್ದುಪಡಿ ಗಾಯದ ಮೇಲೆ ಬರೆಯಾಗಲಿದೆ ಎಂದರು.

ಸರ್ಕಾರವು ಕರ್ನಾಟಕ ನೀರಾವರಿ ಅಧಿನಿಯಮ-1965ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಅಚ್ಚುಕಟ್ಟು ಪ್ರದೇಶದ ನಾಲೆ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವಂತೆ ಮಾಡುವುದೇ ತಿದ್ದುಪಡಿ ಕಾಯ್ದೆ ಮಹೋನ್ನತ ಉದ್ದೇಶ ಎಂಬುದಾಗಿ ಸರ್ಕಾರ ಹೇಳಿದೆ. ಆದರೆ, ಇದು ರೈತರನ್ನು ಬಲಿ ತೆಗೆದುಕೊಳ್ಳುವ ತಿದ್ದುಪಡಿ ಕಾಯ್ದೆ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು.

ಕಾಯ್ದೆ ಉಲ್ಲಂಘಿಸುವಂತಹ ರೈತರಿಗೆ 2 ಲಕ್ಷ ರು.ಗೂ ಅದಿಕ ದಂಡದ ಹಣ ವಿಧಿಸಿ, ವಸೂಲು ಮಾಡಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಇಂತಹ ಕಾಯ್ದೆಯಿಂದಾಗಿ ರೈತರು ಅಧಿಕಾರಿ ವರ್ಗಕ್ಕೆ ಸಹಜವಾಗಿಯೇ ಬಲಿಯಾಗುವಂತಹ ವಾತಾವರಣ ನಿರ್ಮಾಣವಾಗಲಿದೆ. ಸರ್ಕಾರ ಇಂತಹ ತಿದ್ದುಪಡಿ ಕಾಯ್ದೆ ಬದಲು, ನಾಲೆಗಳ ನೀರನ್ನು ವೈಜ್ಞಾನಿಕವಾಗಿ ಬಳಸುವ, ನಾಲೆಗಳ ದುರಸ್ತಿಯಂತಹ ಕಾರ್ಯ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ನಾಟಿ ವಿಧಾನದ ಮೂಲಕ ಬತ್ತ ಬೆಳೆಯುವುದನ್ನು ತಡೆಯಬೇಕು. ಬದಲಿಗೆ ಬಿತ್ತನೆ ವಿಧಾನದ ಮೂಲಕ ಬತ್ತ ಬೆಳೆಯುವ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರ ಮನಃ ಪರಿವರ್ತನೆ ಕೆಲಸಕ್ಕೆ ಮುಂದಾಗಬೇಕು. ಸಾಧ್ಯವಾದರೆ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಬಗ್ಗೆ ಕಾನೂನು ತರಲಿ. ಆಗ ಶೇ.50ರಷ್ಟು ನೀರನ್ನು ಉಳಿತಾಯ ಮಾಡುವ ಜೊತೆಗೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬಹುದು. ಇಂತಹ ಬದಲಾವಣೆ ಕಡೆಗೆ ಸರ್ಕಾರ ಆಲೋಚಿಸಲಿ. ಅದನ್ನು ಬಿಟ್ಟು ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನಲ್ಲ ಎಂದು ತಿಳಿಸಿದರು.

ಉಳಿತಾಯವಾಗುವ ನೀರನ್ನು ಅಗತ್ಯವಿರುವ ವೇಳೆ ಸರ್ಕಾರವೇ ಅವಶ್ಯಕತೆಗೆ ತಕ್ಕಂತೆ ಹರಿಸಬಹುದು. ನೀರಾವರಿ ಪ್ರದೇಶದಲ್ಲೇ ಶೇ.25ರಷ್ಟು ನೀರು ಪೋಲಾಗುತ್ತಿದೆ. ಪೋಲಾದ ನೀರನ್ನು ತಡೆ ಹಿಡಿಯಬೇಕು. ರೈತರು, ಕೃಷಿ, ನೀರಿನ ವಿಚಾರವಾಗಿ ಸರ್ಕಾರವೂ ಹೊಸ ಹೊಸ ಚಿಂತನೆ ಮಾಡಬೇಕು. ಅದನ್ನು ಬಿಟ್ಟು ರೈತ ವರ್ಗವನ್ನೇ ಸಂಕಷ್ಟಕ್ಕೆ ಸಿಲುಕಿಸಲು ಕಾಯ್ದೆಗೆ ತಿದ್ದುಪಡಿ ತರುವುದು ಸರಿಯಲ್ಲ. ರೈತ ವಿರೋಧಿ ಯೋಜನೆ ಕೈಬಿಟ್ಟು, ರೈತರ ಪರ ಯೋಜನೆ ಮಾಡಲಿ. ರೈತರು, ನಾಡಿನ ಉನ್ನತಿಗಾಗಿ ಕಾನೂನು, ಯೋಜನೆ ರೂಪಿಸಲಿ ಎಂದು ಶಿವಕುಮಾರಪ್ಪ ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಪಕ್ಷದ ಮುಖಡಂರಾದ ಆದಿಲ್ ಖಾನ್, ಸುರೇಶ, ಶಿಡ್ಲಪ್ಪ, ಧರ್ಮಾನಾಯ್ಕ, ಅಜಿತಕುಮಾರ ಇತರರು ಇದ್ದರು. ಕರ್ನಾಟಕ ನೀರಾವರಿ ಅಧಿನಿಯಮ-1965ರ ಕಾನೂನು ತಿದ್ದುಪಡಿ ಕಾಯ್ದೆಯು ಅಚ್ಚುಕಟ್ಟು ಕೊನೆ ಭಾಗದ ರೈತರಿಗೆ ನೀರೊದಗಿಸುವ ತಿದ್ದುಪಡಿ ಕಾಯ್ದೆಯಾಗಿರದೇ, ಅಧಿಕಾರ ಚಲಾಯಿಸುವ ವ್ಯಕ್ತಿಗಳಿಗೆ ಸುವರ್ಣ ಕೀಲಿ ಕಾಯ್ದೆಯಾಗಲಿದೆ. ಇಂತಹ ತಿದ್ದುಪಡಿ ಕಾಯ್ದೆ ವಿಚಾರ ಕೈಬಿಟ್ಟು, ರೈತ ಪರ ಆಲೋಚನೆ, ಯೋಚನೆ, ಯೋಜನೆ ಮಾಡಲು ಸರ್ಕಾರ ಮುಂದಾಗಲಿ. ರೈತರ ಪರ ನಿಲುವುಗಳನ್ನು ಸರ್ಕಾರ ಕೈಗೊಳ್ಳಲಿ.

ಕೆ.ಎಸ್.ಶಿವಕುಮಾರಪ್ಪ, ಜಿಲ್ಲಾಧ್ಯಕ್ಷ, ಆಮ್ ಆದ್ಮಿ ಪಕ್ಷ.

Share this article