ಶಾಸಕ ಈಶ್ವರ್ ಮೇಲಿನ ದಾಳಿ ಪೂರ್ವಯೋಜಿತ ಕೃತ್ಯ: ಕಾಂಗ್ರೆಸ್ ಮುಖಂಡರ ಆಕ್ರೋಶ

KannadaprabhaNewsNetwork |  
Published : Jul 01, 2026, 01:15 AM IST
ಸಿಕೆಬಿ-3 ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಹಿಂದ ವರ್ಗದ ಮುಖಂಡರು ಮಾತನಾಡಿದರು | Kannada Prabha

ಸಾರಾಂಶ

ಶನಿವಾರ ನಗರದ ಕನ್ನಡ ಭವನದಲ್ಲಿ ಕಾರ್ಯಕ್ರಮವೂ ಶಾಂತಿಯುತವಾಗಿ ಆರಂಭವಾಗಿತ್ತು. ಆದರೆ ಹೊರಗಿನಿಂದ ಬಂದ ಕೆಲ ಕಿಡಿಗೇಡಿಗಳು, ಮದ್ಯದ ಅಮಲಿನಲ್ಲಿದ್ದವರು ಶಾಸಕರ ಮೇಲೆ ಅಕ್ಷರಶಃ ದಾಳಿ ನಡೆಸಲು ಮುಂದಾಗಿದ್ದು ಸರ್ವಥಾ ಸರಿಯಲ್ಲ

-ದಾಳಿ ವ್ಯಕ್ತಿಗತ ದಾಳಿಯಲ್ಲ, ಅದು ಅಹಿಂದ ವರ್ಗದ ಮೇಲಿನ ದಾಳಿ । ಕಾಂಗ್ರೆಸ್ ಮುಖಂಡರ ಆಕ್ರೋಶ । ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ಗೆ ಆಗ್ರಹ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದಿರುವುದು ಕೇವಲ ವ್ಯಕ್ತಿಗತ ದಾಳಿಯಲ್ಲ, ಅದು ಅಹಿಂದ ವರ್ಗದ ಮೇಲಿನ ತೀವ್ರ ದಾಳಿ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಸಂಸ ಹಿರಿಯ ಮುಖಂಡ ಸು.ದಾ. ವೆಂಕಟೇಶ್ ಮಾತನಾಡಿ ಶನಿವಾರ ನಗರದ ಕನ್ನಡ ಭವನದಲ್ಲಿ ಕಾರ್ಯಕ್ರಮವೂ ಶಾಂತಿಯುತವಾಗಿ ಆರಂಭವಾಗಿತ್ತು. ಆದರೆ ಹೊರಗಿನಿಂದ ಬಂದ ಕೆಲ ಕಿಡಿಗೇಡಿಗಳು, ಮದ್ಯದ ಅಮಲಿನಲ್ಲಿದ್ದವರು ಶಾಸಕರ ಮೇಲೆ ಅಕ್ಷರಶಃ ದಾಳಿ ನಡೆಸಲು ಮುಂದಾಗಿದ್ದು ಸರ್ವಥಾ ಸರಿಯಲ್ಲ ಎಂದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಗಲಾಟೆ ಮಾಡುವವರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಜೋರು ದನಿಯಲ್ಲಿ ಇದು ಅಂಬೇಡ್ಕರ್ ಜಯಂತಿಯಲ್ಲ. ಕೆಂಪೇಗೌಡರ ಜಯಂತಿ. ಶಿಸ್ತನ್ನು ಕಾಪಾಡಿ ಎಂದು ಹೇಳುವ ಮೂಲಕ ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ. ಇದು ನಾವು ದೊಡ್ಡ ಸಮುದಾಯ ಎಂದು ಹೇಳಿಕೊಳ್ಳುವವರಿಗೆ ಶೋಭೆ ತರುವುದಿಲ್ಲ. ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದು ದುರುದ್ದೇಶದಿಂದ ಬಂದವರು ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಕನ್ನಡ ಭವನದಲ್ಲಿದ್ದ ಜನತೆ ಕಣ್ಣಾರೆ ಕಂಡಿದ್ದಾರೆ ಎಂದರು.

ಅನುಮಾನಗಳಿಗೆ ಕಾರಣ: ವಾಲ್ಮೀಕಿ ಸಮುದಾಯದ ಮುಖಂಡ ಗವಿರಾಯಪ್ಪ ಮಾತನಾಡಿ, ಜಯಂತಿಯಂದು ಶಾಸಕರು ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಬಂದಾಗ ಎಲ್ಲವೂ ಶಾಂತಿಯುತವಾಗಿತ್ತು. ಮೆರವಣಿಗೆಯಲ್ಲಿ ಅವರನ್ನು ಬಿಗಿದಪ್ಪಿಕೊಂಡು ಕುಣಿದಾಡಿದವರೆ ನಂತರದ ಬೆಳವಣಿಗೆಗಳಲ್ಲಿ ಶಾಸಕರ ವಿರುದ್ಧವೇ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾರ್ಯಕ್ರಮ ಮುಗಿಸಿ ಶಾಸಕರು ತಮ್ಮ ಕಾರಿನಲ್ಲಿ ತೆರಳುವ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹೀನಾಯವಾಗಿ ನಿಂದಿಸಿದ ಕಾರಣಕ್ಕೆ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಹಣ ಕೊಟ್ಟು ಗಲಭೆ:

ಬಲಿಜ ಜನಾಂಗದ ಮುಖಂಡ ಡ್ಯಾನ್ಸ್ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಜಯಂತಿ ಕೀಳು ಅಥವಾ ಕೆಂಪೇಗೌಡ ಜಯಂತಿ ಮೇಲು ಎಂಬ ಭೇದಭಾವ ತೋರಬಾರದು. ಎಲ್ಲ ಮಹನೀಯರೂ ಸಮಾನರು ಎಂಬುದನ್ನು ಒಕ್ಕಲಿಗ ಮುಖಂಡರು ಅರಿಯಬೇಕು. ಗಲಭೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ರಾಜಕೀಯ ಶಾಶ್ವತವಲ್ಲ. ಹಣ ಕೊಟ್ಟು ಗಲಭೆ ಮಾಡಿಸುವುದು ಸರಿಯಲ್ಲ ಎಂದು ಗಂಭೀರ ಆರೋಪ ಮಾಡಿದ ಅವರು ಪ್ರಚೋದನೆ ನೀಡುವವರಿಗೆ ಜನರ ಶಾಪ ತಟ್ಟಲಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ನಾಯನಹಳ್ಳಿ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಜಾಫರ್, ಮುಖಂಡರಾದ ಕೋಲಾಟ್ಲು ರಾಮಚಂದ್ರ, ನಾಗೇಶ್ ರೆಡ್ಡಿ,ರಮೇಶ್ ಬಾಬು, ನಾರಾಯಣಮ್ಮ ಹಮೀಮ್, ಖಲೀಲ್, ತಿಪ್ಪೇನಹಳ್ಳಿ ನಾರಾಯಣ್, ಪೆದ್ದಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಹಿಂದ ಮುಖಂಡರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರ ವೇತನ ಭರಿಸುವುದು ವಿವಿಗಳಿಗೆ ಅಸಾಧ್ಯ: ಮಧು
ಬದುಕಿನ ಸವಾಲು ಎದುರಿಸಲು ಪುಸ್ತಕ ಓದಿ: ಡಾ.ಮಾನಸ