ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನ

KannadaprabhaNewsNetwork |  
Published : May 24, 2025, 01:52 AM IST
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಲಬುರಗಿಯಲ್ಲಿ ಖರ್ಗೆ ಕುಟುಂಬದಿಂದ ಸೇಡಿನ ರಾಜಕಾರಣ ನಡೆಯುತ್ತಿದೆ. ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ನಡೆದಿದೆ. ಆದರೆ, ಪೊಲೀಸರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಖರ್ಗೆ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಲಬುರಗಿಯಲ್ಲಿ ಖರ್ಗೆ ಕುಟುಂಬದಿಂದ ಸೇಡಿನ ರಾಜಕಾರಣ ನಡೆಯುತ್ತಿದೆ. ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ನಡೆದಿದೆ. ಆದರೆ, ಪೊಲೀಸರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಖರ್ಗೆ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ವಿಧಾನ ಪರಿಷತ್‌ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ನಡೆದ ಹಲ್ಲೆ, ಅಕ್ರಮ ಬಂಧನ ಹಾಗೂ ವಾಹನ ನಾಶಪಡಿಸಿದ ವೇಳೆಯೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಿಪಬ್ಲಿಕ್‌ ಆಫ್‌ ಕಲಬುರಗಿ, ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ತುಘಲಕ್‌ ದರ್ಬಾರ್‌ ನಡೆಯುತ್ತಿದೆ ಎಂದು ದೂರಿದರು.ಕಲಬುರಗಿಯಲ್ಲಿ ನಡೆದ ಘಟನೆಗಳನ್ನು ನೋಡಿದರೆ ಪೊಲೀಸರ ನಿಷ್ಠೆ ಯಾರ ಕಡೆಗೆ ಇದೆ ಎಂಬುದು ಗೊತ್ತಾಗುತ್ತದೆ. ಸಂವಿಧಾನ ಬದ್ಧವಾಗಿ, ಕಾನೂನಾತ್ಮಕವಾಗಿ ರಕ್ಷಣೆ ನೀಡಬೇಕಾದ ಪೊಲೀಸ್‌ ಅಧಿಕಾರಿಗಳು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಏಜೆಂಟರಂತೆ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.ಛಲವಾದಿ ನಾರಾಯಣಸ್ವಾಮಿ ಅವರು ಈ ಹಿಂದೆ ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ಬಗ್ಗೆ ಸದನದಲ್ಲಿ ಹೋರಾಟ ಮಾಡಿದ್ದರಿಂದ ಕೆಐಎಡಿಬಿಯು ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ನೀಡಿದ್ದ 5 ಎಕರೆ ಜಮೀನು ವಾಪಸ್‌ ನೀಡುವಂತಾಯಿತು. ಇದರ ಸೇಡಿನಿಂದ ಖರ್ಗೆ ಅವರು ತಮ್ಮ ಬೆಂಬಲಿಗರ ಮೂಲಕ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದೊಂದು ಪೂರ್ವನಿಯೋಜಿತ, ರಾಜಕೀಯ ಪ್ರೇರಿತ ದಾಳಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ವಿಪಕ್ಷ ನಾಯಕರು ಗೃಹ ಸಚಿವರು, ಎಡಿಜಿಪಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಗೃಹ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಕಲಬುರಗಿಯಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಿಯಾಂಕ ಖರ್ಗೆ ವಿರುದ್ಧ ಹೋರಾಟ ನಡೆಸಲಾಗುವುದು. ಖರ್ಗೆ ಹಠಾವೋ, ಕಲಬುರಗಿ ಬಚಾವೋ ಹೋರಾಟವನ್ನು ಖರ್ಗೆ ರಾಜೀನಾಮೆ ನೀಡುವವರೆಗೂ ಬಿಡುವುದಿಲ್ಲ ಎಂದರು.ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ ನಾಯಕರನ್ನು ಗುರಿಯಾಗಿಸುತ್ತಿದೆ. ಪ್ರಿಯಾಂಕ ಖರ್ಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಹಣಮಂತ ಕೊಂಗಾಲಿ, ರಮೇಶ ದೇಶಪಾಂಡೆ, ರಾಜಶೇಖರ ಡೋಣಿ, ಈರಯ್ಯ ಖೋತ, ಮಲ್ಲಿಕಾರ್ಜುನ ಮಾದಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್