ಕಾಂಗ್ರೆಸ್‌ ಕುಮ್ಮಕ್ಕಿನಿಂದಲೇ ಜೈಶ್ರೀರಾಮ ಘೋಷಣೆ ಕೂಗಿದವರ ಮೇಲೆ ಹಲ್ಲೆ

KannadaprabhaNewsNetwork | Published : Apr 19, 2024 1:06 AM

ಸಾರಾಂಶ

ಈ ಹಿಂದೆ ಹಿಂದೂಗಳ ಹತ್ಯೆ, ಹಿಂದೂ ಮಹಿಳೆಯರ ಅತ್ಯಾಚಾರಕ್ಕೆ ಮುಸ್ಲಿಂ ಲೀಗ್ ಕರೆ ಕೊಟ್ಟಿತ್ತು. ಇಂಥ ಒಂದು ವಿದ್ರೋಹಿ ಕೃತ್ಯಗಳ ಪರ ಇರುವ ಮುಸ್ಲಿಂ ಲೀಗ್ ಧ್ವಜ ಹಿಡಿದು ಚುನಾವಣೆಗೆ ಇಳಿದಿದ್ದಾರೆ ರಾಹುಲ್ ಗಾಂಧಿ.

ಹುಬ್ಬಳ್ಳಿ:

ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲಿನ ಹಲ್ಲೆ ನಡೆದಿರುವುದು ಖಂಡನೀಯ. ಕಾಂಗ್ರೆಸ್‌ ಕುಮ್ಮಕ್ಕಿನಿಂದಲೇ ಇದೆಲ್ಲ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳಿಗೆ ಕಾಂಗ್ರೆಸ್‌ನ ಪರಮೋಚ್ಚ ನಾಯಕ ರಾಹುಲ್‌ ಗಾಂಧಿಯೇ ಕಾರಣ ಎಂದು ಕಿಡಿಕಾರಿದರು. ರಾಹುಲ್‌ ಗಾಂಧಿಗೆ ತಮ್ಮ ಪಕ್ಷದ ಬಗ್ಗೆಯೇ ಕಿಮ್ಮತ್ತಿಲ್ಲ. ತಾವು ನಾಮಪತ್ರ ಸಲ್ಲಿಕೆ ವೇಳೆ ಮುಸ್ಲಿಂ ಲೀಗ್‌ ಧ್ವಜ ಹಿಡಿದು ನಾಮಪತ್ರ ಸಲ್ಲಿಸಿ ಬಂದಿದ್ದಾರೆ. ಕಾಂಗ್ರೆಸ್‌ನವರ ಇಂಥ ನಡೆ ದೇಶ ವಿದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ಕೊಟ್ಟಿದೆ ಎಂದು ಆರೋಪಿಸಿದರು.

ಈ ಹಿಂದೆ ಹಿಂದೂಗಳ ಹತ್ಯೆ, ಹಿಂದೂ ಮಹಿಳೆಯರ ಅತ್ಯಾಚಾರಕ್ಕೆ ಮುಸ್ಲಿಂ ಲೀಗ್ ಕರೆ ಕೊಟ್ಟಿತ್ತು. ಇಂಥ ಒಂದು ವಿದ್ರೋಹಿ ಕೃತ್ಯಗಳ ಪರ ಇರುವ ಮುಸ್ಲಿಂ ಲೀಗ್ ಧ್ವಜ ಹಿಡಿದು ಚುನಾವಣೆಗೆ ಇಳಿದಿದ್ದಾರೆ ರಾಹುಲ್ ಗಾಂಧಿ ಎಂದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ, ಈಗ ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ. ಇದೆಲ್ಲದ್ದಕ್ಕೂ ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವುದೇ ಕಾರಣ. ಈ ಘಟನೆಗಳು ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದನ್ನು ಸ್ಪಷ್ಟಪಡಿಸುತ್ತಿವೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಉಗ್ರವಾದಿ ಕೃತ್ಯ, ಭಯೋತ್ಪಾದನೆಗೆ ಪ್ರೋತ್ಸಾಹ ಸಿಗುತ್ತಿದ್ದು ಜನ ಜಾಗ್ರತಾರಾಗಬೇಕು ಎಂದು ಕರೆ ನೀಡಿದರು.

ಇವರಿಂದ ಎಷ್ಟು ಸಾಲ ಮನ್ನಾ?:

ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಆಗೇಕೆ ರೈತರ ಸಾಲ ಮನ್ನಾ ಮಾಡಲಿಲ್ಲ? ಮೊದಲು ಇದಕ್ಕೆ ಉತ್ತರಿಸಲಿ. 60 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ₹ 45 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಆದರೆ, ಮೋದಿ ಸರ್ಕಾರ ಹತ್ತೇ ವರ್ಷದಲ್ಲಿ ಬರೋಬ್ಬರಿ ₹ 3 ಲಕ್ಷ ಕೋಟಿ ಕಿಸಾನ್ ಸಮ್ಮಾನ್ ನಿಧಿ ನೀಡಿದೆ. ಈ ಮೂಲಕ ರೈತರಿಗೆ ಬೆಂಬಲವಾಗಿ ನಿಂತಿದೆ ಎಂದು ಪ್ರತಿಪಾದಿಸಿದರು.

ರಾಹುಲ್ ಗಾಂಧಿ ರೈತರ ಸಾಲ ಮನ್ನಾ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಎಷ್ಟರ ಮಟ್ಟಿಗೆ ಜನಕ್ಕೆ ಮೋಸ ಮಾಡುತ್ತಿದ್ದಾರೆ ಎಂಬುದನ್ನು ಜನರೂ ಅರಿತಿದ್ದಾರೆ ಎಂದರು.

ರಾಹುಲ್ ಗಾಂಧಿ ಒಬ್ಬ ಬೇಜವಾಬ್ದಾರಿ ಮತ್ತು ಬರೀ ಸುಳ್ಳು ಹೇಳುವ ಮನುಷ್ಯ. ಇಂಥ ನಾಯಕ ಇನ್ನು ದೇಶದ ಜನಕ್ಕೇನು ಒಳ್ಕೆಯದು ಮಾಡುತ್ತಾರೆ? ಎಂದು ಪ್ರಶ್ನಿಸಿದ ಅವರು, ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದ ಉದ್ಯಮಿಗಳ ನಯಾ ಪೈಸೆ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿಲ್ಲ. ಬದಲಿಗೆ ಅಂಥವರನ್ನು ಹುಡುಕಿ ಕರೆ ತರುವ ಕೆಲಸವನ್ನು ಮಾಡಿದೆ ಎಂದು ತಿರುಗೇಟು ನೀಡಿದರು.

Share this article