ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಚಿವ ಶಿವರಾಜ ತಂಗಡಗಿ ದಲಿತ ಸಮುದಾಯದ ವ್ಯಕ್ತಿ. ಉದ್ದೇಶ ಪೂರ್ವಕವಾಗಿ ದಲಿತರ ಮೇಲೆ ವಾಗ್ದಾಳಿ ಬಿಜೆಪಿ ತಂತ್ರವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಹೇಳನ ಮಾಡಿದ್ದರು. ಇದು ಬಿಜೆಪಿ ಸಂಸ್ಕೃತಿಯಾಗಿದೆ. ಮಾಜಿ ಸಚಿವ ಸಿ.ಟಿ.ರವಿ ಬಳಸಿರುವ ಪದ ಸಂಘ ಪರಿವಾರದಿಂದ ಬಂದಿರುವ ಬಳುವಳಿಯಾಗಿವೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ, ಬಿಜೆಪಿಯವರು 2014ರ ಲೋಕಸಭೆ ಚುನಾವಣೆ ವೇಳೆ ಪ್ರತಿವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕನಿಷ್ಠ 1 ಕೋಟಿ ಉದ್ಯೋಗವನ್ನೂ ಈವರೆಗೆ ಸೃಷ್ಟಿಸಿಲ್ಲ ಎಂದರು. ಆ ಮೂಲಕ ಮೋದಿ ಬೆಂಬಲಿಸುವವರಿಗೆ ಕಪಾಳಮೋಕ್ಷ ಮಾಡಬೇಕೆಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಚಿವ ಶಿವರಾಜ ತಂಗಡಗಿ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಮಾಜಿ ಸಚಿವ ಸಿ.ಟಿ.ರವಿ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದಾಗ ಘೋಷಿಸಿದ್ದ ಆಸ್ತಿ ಎಷ್ಟು? ಇಂದಿನ ಆಸ್ತಿ ಎಷ್ಟು ಎಂಬ ಬಗ್ಗೆ ತಾಕತ್ತಿದ್ದರೆ ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಆಣೆ ಮಾಡಲು ಸಿದ್ಧರಿದ್ದೀರಾ? ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ಸರ್ಕಾರದ ವೈಫಲ್ಯ ಪ್ರಶ್ನಿಸುತ್ತಿದ್ದಾರೆ. ಇದನ್ನು ತಡೆದುಕೊಳ್ಳದ ಬಿಜೆಪಿಯವರು ಅವರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.ಕಾಂಗ್ರೆಸ್ ಮುಖಂಡರಾದ ಎಂ.ಕೆ. ಲಿಯಾಖತ್ ಅಲಿ, ಮಂಜುನಾಥ, ಹುಲಿಕಟ್ಟೆ ಚಂದ್ರಪ್ಪ, ಎನ್.ಎಸ್. ವೀರಭದ್ರಪ್ಪ, ಬಿ.ಎಚ್. ಉದಯಕುಮಾರ, ರಾಜಶೇಖರ, ಡಿ.ಶಿವಕುಮಾರ, ವಿನಾಯಕ ಇತರರು ಇದ್ದರು.
- - - -27ಕೆಡಿವಿಜಿ2:ದಾವಣಗೆರೆಯಲ್ಲಿ ಬುಧವಾರ ಕೆಪಿಸಿಸಿ ವಕ್ತಾರ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.